ಧರ್ಮಸ್ಥಳ: ಕಾಂತಾರ ಚಲನಚಿತ್ರದ ನಿರ್ದೇಶಕ ಹಾಗು ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಇತ್ತೀಚೆಗೆ
ಮಂಗಳೂರಿನಲ್ಲಿ “ಕಾಂತಾರ” ಚಲನಚಿತ್ರ ನೋಡಿದ್ದು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಹೆಗ್ಗಡೆಯವರು ರಿಷಬ್ ಶೆಟ್ಟಿ ದಂಪತಿಯನ್ನು ಗೌರವಿಸಿ ಅಭಿನಂದಿಸಿದರು.ನಟ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಿನಿಮಾ ತಯಾರಿ ಮೊದಲೆ ಧರ್ಮಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿ, ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದೆ. ಕಾಂತಾರದ ದೈವಾರಾಧನೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ. ಹೆಗ್ಗಡೆಯವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದ ರಿಷಬ್ ಶೆಟ್ಟಿ ಎಲ್ಲಾ ಕಡೆಗಳಲ್ಲಿ ಎರಡು ತಿಂಗಳಿಗೂ ಮಿಕ್ಕಿ ಜನರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಹಿಂದಿ, ತುಳು ಹಾಗೂ ಇತರ ಭಾಷೆಗಳಲ್ಲ್ಲಿಯೂ ಸದ್ಯದಲ್ಲಿಯೇ ಕಾಂತಾರ ಪ್ರದರ್ಶನವಾಗಲಿದೆ ಎಂದು ಅವರು ಹೇಳಿದರು.