ತಿರುವನಂತಪುರಂ: ಬಿಜೆಪಿ ಕೇರಳ ಘಟಕದ ನೂತನ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲು ಪಕ್ಷ ನಿರ್ಣಯಿಸಿದೆ. ಪಕ್ಷದ ಕೇಂದ್ರ ಘಟಕ ರಾಜೀವ್ ಚಂದ್ರಶೇಖರ್ ಅವರ ಹೆಸರನ್ನು ಸೂಚಿಸಿದ್ದು, ರಾಜ್ಯ ಘಟಕದ ಕೋರ್ ಕಮಿಟಿ ಇದನ್ನು ಅಂಗೀಕರಿಸಿದೆ.ಅವರು ಅಧ್ಯಕ್ಷ ಸ್ಥಾನಕ್ಕೆ ಇಂದು ನಾಮ ಪತ್ರಿಕೆ ಸಲ್ಲಿಸಲಿದ್ದು, ನಾಳೆ ನೂತನ ಅಧ್ಯಕ್ಷರ ಅಧಿಕೃತ ಘೋಷಣೆಯಾಗಲಿದೆ. ಇದೇ ವೇಳೆ
.ಸ್ಥಾನಾರೋಹಣ ನಡೆಯಲಿದೆ. ಮುಂಬರುವ ಸ್ಥಳೀಯಾಡಳಿತ ಮತ್ತು ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಯುವ ತಲೆಮಾರನ್ನು ಪಕ್ಷದ ಕಡೆಗೆ ಆಕರ್ಷಿಸುವ ಉದ್ದೇಶದೊಂದಿಗೆ ರಾಜೀವ್ ಚಂದ್ರಶೇಖರ್ ಅವರಿಗೆ ಪಕ್ಷ ಸಾರಥ್ಯವನ್ನು ಕೇಂದ್ರ ಘಟಕ ಒಪ್ಪಿಸಿದೆ.ಎರಡು ದಶಕಗಳ ರಾಜಕೀಯ ಅನುಭವ ಹೊಂದಿರುವ ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಕರ್ನಾಟಕದಲ್ಲಿ ವೃತ್ತಿ ಜೀವನ ಆರಂಭಿಸಿದರೂ, ಅವರ ಕುಟುಂಬವು ಕೇರಳದ ಪಾಲಕ್ಕಾಡ್ ಮೂಲದವರು. ಅವರು 2006 ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಪ್ರವೇಶಿಸಿದರು ಮತ್ತು ಸತತ ಮೂರು ಬಾರಿ ಮರು ಆಯ್ಕೆಯಾದರು. 2021 ರಲ್ಲಿ, ಅವರನ್ನು ಕೇಂದ್ರ ರಾಜ್ಯ ಸಚಿವರನ್ನಾಗಿ ನೇಮಿಸಲಾಯಿತು. ಅವರು ಕೇರಳ ಎನ್ಡಿಎ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.