ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ಕೆಪಿಸಿಸಿ ಉಪಸಮಿತಿ ರಚಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದೇಶ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ಸ್ಥಳೀಯ ಕೆಲವೊಂದು ಕಾರಣಗಳಿಗಾಗಿ
ಕೆಪಿಸಿಸಿಯಿಂದ ತಡೆ ಹಿಡಿಯಲಾಗಿತ್ತು. ಈ ಬಗ್ಗೆ ಸ್ಥಳೀಯವಾಗಿ ಎಲ್ಲರ ಅಭಿಪ್ರಾಯವನ್ನು ಪಡೆದು ಒಮ್ಮತದ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಲು ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್. ಸುದರ್ಶನ್ ಮತ್ತು ಎಂ. ನಾರಾಯಣಸ್ವಾಮಿ ಅವರನ್ಬು ವೀಕ್ಷಕರಾಗು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ನೇಮಿಸಿರುತ್ತಾರೆ. ಈ ಪ್ರಕ್ರಿಯೆಗಳ ಸಲುವಾಗಿ ಸ್ಥಳೀಯ ಹಿರಿಯ ನಾಯಕರುಗಳು, ಉಸ್ತುವಾರಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕೆಪಿಸಿಸಿ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಮಾ.1ರಂದು ಪೂ. 11.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಛೇರಿ, ಮಂಗಳೂರು ಇಲ್ಲಿ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ. ಈ ಸಭೆಯಲ್ಲಿ ಸ್ಥಳೀಯ 2023ರ ವಿಧಾನಸಭಾ ಅಭ್ಯರ್ಥಿ, ಲೋಕಸಭಾ ಅಭ್ಯರ್ಥಿ, ಜಿಲ್ಲೆಯ ಹಿರಿಯ ನಾಯಕರುಗಳು ಮತ್ತು ಅಗತ್ಯ ಇರುವ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಲ್ಲಾ ಮುಂಚೂಣಿ ಘಟಕ, ವಿಭಾಗ ಮತ್ತು ಸೆಲ್ ಗಳ ಪ್ರಧಾನರನ್ನು ಮತ್ತು ಇನ್ನಿತರ ಪ್ರಮುಖರನ್ನು ಆಹ್ವಾನಿಸಿ ಈ ಸಭೆಯಲ್ಲಿ ಎಲ್ಲರೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಪರಿಶೀಲಿಸಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಕೆಪಿಸಿಸಿ ಅಧ್ಯಕ್ಷರಿಗೆ ನಿಯೋಜಿತ ವೀಕ್ಷಕರು ವರದಿಯನ್ನು ಸಲ್ಲಿಸಬೇಕು. ಸದರಿ ವರದಿಯನ್ನು ಪರಿಶೀಲಿಸಿ ಅಧ್ಯಕ್ಷರು ಮುಂದಿನ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷರು ಆದೇಶ ಮಾಡಿದ್ದರು. ಈ ನೇಮಕಾತಿಯ ವಿರುದ್ಧ ಕೆಲವು ಮುಖಂಡರು ಕೆಪಿಸಿಸಿಗೆ ದೂರು ಸಲ್ಲಿಸಿದ ಕಾರಣ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.