ಮಂಗಳೂರು:ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆಯಾಗಿದ್ದು,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದೆ. ರಾಜ್ಯದ ವಿವಿಧ ಕಡೆ ಮತ್ತೆ ಮಳೆ ಮುಂದಿವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಐಎಂಡಿ ಪ್ರಕಾರ ಗುರುವಾರ ಸಂಜೆ ವಿವಿಧ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ, ಗರಿಷ್ಠ ತಾಪಮಾನವು
ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ಗೆ ಇಳಿಯಬಹುದು ಎಂದು ಐಎಂಡಿ ತಿಳಿಸಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನದಲ್ಲಿ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.ಈಮಧ್ಯೆ, ಅನೇಕ ಕಡೆಗಳಲ್ಲಿ ಬುಧವಾರ ಸಂಜೆ ಮತ್ತು ರಾತ್ರಿ ಮಳೆಯಾಗಿದೆ. ಪರಿಣಾಮವಾಗಿ ಇಳೆ ತುಸು ತಂಪಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದೆ. ಚಿಕ್ಕಮಗಳೂರು,
ಹಾಸನ ಜಿಲ್ಲೆಯಲ್ಲಿ ವಿವಿಧೆಡೆ ಮಳೆ ಸುರಿದಿದೆ. ತುಮಕೂರಿನಲ್ಲೂ ಗುಡುಗು, ಗಾಳಿ ಸಹಿತ ಮಳೆಯಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಿಢೀರ್ ಮಳೆ ಬಂದಿದೆ.