ಸುಳ್ಯ:ಅಮೇರಿಕಾದ ವಿರುದ್ಧವೂ ಸೆಟೆದು ನಿಲ್ಲುವ ಧೈರ್ಯ ಮತ್ತು ಶಕ್ತಿಯನ್ನು ಇಂದು ಭಾರತ ಪಡೆದುಕೊಂಡಿದೆ. ಆದುದರಿಂದ ನಮ್ಮ ಕಲ್ಪನೆಯ ಸದೃಢ ಭಾರತ ಕಟ್ಟಲು ಇದು ಸೂಕ್ತ ಸಮಯ. ಅದಕ್ಕಾಗಿ ಭೇಧಭಾವ ಮರೆತು ಯುವ ಶಕ್ತಿ ದೇಶಕ್ಕಾಗಿ ಎದ್ದು ನಿಲ್ಲಬೇಕು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ 12ನೇ ವರ್ಷದ
ಆಕರ್ಷಕ ಸುಳ್ಯ ಮೊಸರು ಕುಡಿಕೆ ಉತ್ಸವ ಹಾಗೂ ವೈಭವದ ಶೋಭಾ ಯಾತ್ರೆಯ ಅಂಗವಾಗಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಆಪರೇಷನ್ ಸಿಂಧೂರ ಮೂಲಕ ಕೇಲವ ನಾಲ್ಕು ದಿನದಲ್ಲಿ ಪಾಕಿಸ್ಥಾನವನ್ನು ಸಂಪೂರ್ಣ ಶರಣಾಗುವಂತೆ ಮಾಡಿದ ಭಾರತವನ್ನು ಅಮೇರಿಕಕ್ಕೂ ಸಡ್ಡು ಹೊಡೆಯುವ ಮಟ್ಟಕ್ಕೆ ಮೋದಿ ಬೆಳೆಸಿದ್ದಾರೆ. ಭಾರತವು ಜಗತ್ತಿನ ಆರ್ಥಿಕ ಶಕ್ತಿಯಾಗಿರುವುದರ ಜೊತೆಗೆ ವಿಶ್ವಕ್ಕೆ ನಾಯಕನಾಗುವ ಮಟ್ಟಕ್ಕೆ ಬೆಳೆದಿದೆ.ಆದರೆ ಆಂತರಿಕವಾಗಿ ನಾವು ಎಷ್ಟು ಬೆಳೆದಿದ್ದೇವೆ ಎಂಬುದನ್ನು ಆಲೋಚಿಸಬೇಕಾಗಿದೆ. ಅಂತಃಸತ್ವ, ಪರಂಪರೆಯನ್ನು ಮರೆಯುತ್ತಿರುವ ತಾರುಣ್ಯ ಹಳ್ಳ ಹಿಡಿಯುತ್ತಿದ್ದು ಚರಂಡಿಗೆ ಬೀಳುವ ಸ್ಥಿತಿ ನಿರ್ಮಾಣ ಆಗಿದೆ.

ನಮ್ಮ ಧರ್ಮಕ್ಷೇತ್ರಗಳ ಬಗ್ಗೆ, ಮಠ ಮಂದಿರಗಳ ವಿರುದ್ಧ ನಡೆಯುವ ಅಪಪ್ರಚಾರದ ವಿರುದ್ಧ ಸೆಟೆದು ನಿಲ್ಲಬೇಕಾದ ಯುವತ್ವ ಇಂದು ಮೊಬೈಲ್ ಲೋಕದಲ್ಲಿ ಮುಳುಗಿ ಹೋಗುತಿದೆ ಎಂದು ಅವರು ಬೊಟ್ಟು ಮಾಡಿದರು. ಈ ರೀತಿ ಮುಂದುವರಿದರೆ ನಮ್ಮ ಪರಂಪರೆಯೇ ನಾಶವಾಗುವ ಅಪಾಯ ಇದೆ ಎಂದ ಅವರು ಧರ್ಮಕ್ಕಾಗಿ, ಸಮಾಜಕ್ಕಾಗಿ ದುಡಿಯುವ ತರುಣರಿಗೆ ಸಮಾಜ ಬೆಂಬಲ, ಶಕ್ತಿ ನೀಡಬೇಕು ಎಂದು ಕರೆ ನೀಡಿದರು.
ಸುಳ್ಯದಲ್ಲಿ ಆಡುವ ಮಾತಿಗೆ ಮೌಲ್ಯ ಸಿಗುತ್ತದೆ:
ಸಮಾಜದ ಆಲೋಚನೆ ಬದಲಾಗಬೇಕು ಎಂದ ಅವರು ಜಾತಿ, ಪಂತಗಳ ಭೇಧಗಳ ಕೋಟೆ ಭೇದಿಸಿ ಹಿಂದೂ ಸಮಾಜ ಒಂದಾಗಬೇಕು ಎಂದು ಕರೆ ನೀಡಿದರು. ಸುಳ್ಯದಲ್ಲಿ ಸಂಘಟನೆಗಳು ಕಳೆದ 50 ವರ್ಷಗಳಿಂದ ಗಟ್ಟಿಯಾಗಿದೆ. ಪ್ರತಿ ಮನೆಯೂ ಸಂಘಟನೆಯೊಂದಿಗೆ ಬೆರೆತುಕೊಂಡಿದೆ. ಆದುದರಿಂದಲೇ ಇಲ್ಲಿ ಹೇಳುವ ಪ್ರತಿ ಮಾತಿಗೂ, ಹೊಸ ಆಲೋಚನೆಗಳಿಗೂ ಮೌಲ್ಯ ಸಿಗಲು ಸಾಧ್ಯ ಎಂದು ಅವರು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕರಾದ ಚಂದ್ರಶೇಖರ ತಳೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ದೈವ ನರ್ತಕ ನರಸಿಂಗ ಪರವ ಸೋಣಂಗೇರಿ,ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಪ್ರಾಂತ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಳ್ಳ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಕ್ರವರ್ತಿ ಸೂಲಿಬೆಲೆ ಹಾಗೂ ನರಸಿಂಗ ಪರವ ಸೋಣಂಗೇರಿ ಅವರನ್ನು ಸನ್ಮಾನಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕೋಶಾಧಿಕಾರಿ ನವೀನ್ ಎಲಿಮಲೆ, ಉಪಾಧ್ಯಕ್ಷರಾದ
ಸೋಮಶೇಖರ ಪೈಕ, ಹರಿಪ್ರಸಾದ್ ಸುಲಾಯ,ವ್ಯವಸ್ಥಾ ಪ್ರಮುಖರಾದ ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಮೇನಾಲ,ಉಪೇಂದ್ರ ನಾಯಕ್, ಮಾತೃಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ,ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ,ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸವಿತಾ ಸಂದೇಶ್ ಪ್ರಾರ್ಥನೆ ಹಾಡಿದರು, ವೈಷ್ಣವಿ ರಾವ್ ವೈಯುಕ್ತಿಕ ಗೀತೆ ಹಾಡಿದರು.
ನವೀನ್ ಎಲಿಮಲೆ ವಂದಿಸಿದರು. ವಿಶಾಖ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ವೈಭವದ ಮೊಸರು ಕುಡಿಕೆ ಉತ್ಸವ: ಸಭಾ ಕಾರ್ಯಕ್ರಮಕ್ಕೂ ಮುನ್ನ ಸುಳ್ಯ ನಗರದಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ ಹಾಗೂ ಶೋಭಾ ಯಾತ್ರೆ ನಡೆಯಿತು.ಯುವಕರ ತಂಡದಿಂದ ಪಿರಮಿಡ್ ಆಕಾರದ ಮಾನವ ಗೋಪುರ ನಿರ್ಮಿಸಿ ಸಾಹಸಮಯವಾಗಿ ಕ್ಷಣ ಮಾತ್ರದಲ್ಲಿ ಅಟ್ಟಿ ಮಡಿಕೆ ಒಡೆಯುವ ಪ್ರದರ್ಶನ ಮೈ ನವಿರೇಳಿಸಿತು. ನಗರದ

17 ಕಡೆ ಸ್ಥಾಪಿಸಲಾದ ಅಟ್ಟಿಮಡಿಕೆ ಒಡಯುವ ಸಾಹಸಮಯ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.11 ತಂಡಗಳು ಭಾಗವಹಿಸಿದ್ದವು. ಬಾಲಕೃಷ್ಣನ ಭಾವಚಿತ್ರ ಹೊತ್ತ ಟ್ಯಾಬ್ಲೋಗಳು, ಚೆಂಡೆ, ಮೇಳ, ವಾದ್ಯ ಘೋಷಗಳು, ಗೊಂಬೆ ಕುಣಿತ, ಕೀಲು ಕುದಿರೆ, ಆಕರ್ಷಕ ವೇಷಗಳು, ಕುಣಿತ ಭಜನೆಯ ಜೊತೆಗೆ ನೂರಾರು ಯುವಕರ ತಂಡ ಶೋಭಾ ಯಾತ್ರೆಗೆ ಮೆರುಗು ತಂದಿತು. ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು ವಿವಿಧ ಕಡೆಗಳ ಮೂಲಕ ಸಾಗಿ ರಥಬೀದಿಯಾಗಿ ಚೆನ್ನಕೇಶವ ದೇವಸ್ಥಾನದ ಬಳಿಗೆ ಆಗಮಿಸಿತು. ಸಭಾ ಕಾರ್ಯಕ್ರಮದ ಬಳಿಕ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸ್ಥಾಪಿಸಿದ ಅಟ್ಟಿಮಡಿಕೆಗಳನ್ನು ಒಡೆಯಲಾಯಿತು.














