ಮುಕ್ಕೂರು: ಅನಾದಿ ಕಾಲದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೆಯ ದಿನದಂದು ಮೇಲಿನ ಮುಕ್ಕೂರು ತರವಾಡಿನ ಭಂಡಾರದ ಮನೆಯಿಂದ ಅರಸು ದೈವಗಳಾದ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ದೈವ ಸಹಿತ ಪರಿವಾರ ದೈವದ ಭಂಡಾರವು ಪೆರುವೋಡಿ ಕ್ಷೇತ್ರಕ್ಕೆ ಬಂದು ದೈವ-ದೇವರ ಭೇಟಿ ನಂತರ ವಿಜೃಂಭಣೆಯ ನೇಮ ನಡೆಯುತಿತ್ತು ಎಂಬ ಅಂಶವು
ಮೇಲಿನ ಮುಕ್ಕೂರಿನಲ್ಲಿ ಅಷ್ಟಮಂಗಲ ಚಿಂತನೆಯಲ್ಲಿ ದಿನ ಕಂಡು ಬಂದಿದೆ. ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಸ್ಥಳ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ದೈವಜ್ಞ ಗಣೇಶ್ ಭಟ್ ಮುಳಿಯ ನೇತೃತ್ವದಲ್ಲಿ ನಡೆದ ಎರಡನೆ ದಿನದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಮೇಲಿನ ಮುಕ್ಕೂರಿನಿಂದ ಪೆರುವೋಡಿ ವಿಷ್ಣುಮೂರ್ತಿ ದೇವಾಲಯದ ಜಾತ್ರೆ ಸಂದರ್ಭದಲ್ಲಿ ದೈವಗಳ ಭಂಡಾರ ಮತ್ತೆ ಹೋಗಬೇಕು. ಅಲ್ಲಿ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು, ಗುಳಿಗ ದೈವಕ್ಕೆ ನೇಮ ಆಗಬೇಕು. ಮರುದಿನ ದೈವಗಳ ಭಂಡಾರವು ಮೇಲಿನ ಮುಕ್ಕೂರಿಗೆ ಬರಬೇಕು ಎಂದವರು ವಿವರಿಸಿದರು
ಮೇಲಿನ ಮುಕ್ಕೂರಿನಲ್ಲಿ ಸಾನಿಧ್ಯಗಳ ಜೀರ್ಣೋದ್ಧಾರದ ಬಳಿಕ ಸ್ಥಳದಲ್ಲೇ ಒಂದು ಬಾರಿ ದೈವಗಳಿಗೆ ನೇಮ ನೀಡಬೇಕು. ಅನಂತರ ಪ್ರತಿ ವರ್ಷ ಕಾಲ ಕಾಲಕ್ಕೆ ಪಂಚ ಪರ್ವ ಸೇವೆಗಳನ್ನು ಸಲ್ಲಿಸಿದರೆ ಸಾಕಾಗುತ್ತದೆ. ಆದರೆ ಪೆರುವೋಡಿ ಕ್ಷೇತ್ರದಲ್ಲಿ ಪ್ರತಿ ಜಾತ್ರಾ ಸಂದರ್ಭದಲ್ಲಿಯು ನೇಮ ನಡೆಯಲೆಬೇಕು. ಇದರಿಂದ ಊರಿಗೆ ಒಳಿತಾಗಲಿದೆ. ಎರಡೂ ಕ್ಷೇತ್ರಗಳು ಇನ್ನಷ್ಟು ಬೆಳಗಲಿದೆ ಎಂದರು.ಪೆರುವೋಡಿ ಕ್ಷೇತ್ರದಲ್ಲಿ ಪಕ್ಕದಲ್ಲೇ ರಕ್ತೇಶ್ವರಿ, ಉಳ್ಳಾಕುಲು ದೈವಗಳ ಭಂಡಾರ ಇರಿಸಲು ಛಾವಡಿ ಇತ್ತು. ಅದನ್ನು ಮತ್ತೆ ನಿರ್ಮಿಸಬೇಕು. ಅಲ್ಲಿ ಪ್ರತಿ ಸಂಕ್ರಮಣಕ್ಕೆ ದೀಪ ಬೆಳಗಿ ದೈವರಾಧನೆ ಮಾಡಬೇಕು ಎಂಬ ಅಂಶ ಪ್ರಶ್ನೆಯಲ್ಲಿ ಕಂಡು ಬಂದಿದೆ.
ಈ ಸಂದರ್ಭದಲ್ಲಿ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಪ್ರಮುಖರಾದ ಎಂ.ಕೆ.ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಉಮೇಶ್ ರಾವ್ ಕೊಂಡೆಪ್ಪಾಡಿ, ಶ್ರೀಧರ ಬೈಪಡಿತ್ತಾಯ, ಮೋಹನ ಬೈಪಡಿತ್ತಾಯ, ವಸಂತ ಬೈಪಡಿತ್ತಾಯ, ಲಕ್ಷ್ಮೀಶ ಬೈಪಡಿತ್ತಾಯ, ರಾಘವೇಂದ್ರ ಬೈಪಡಿತ್ತಾಯ ಸಹಿತ ಊರ ಪ್ರಮುಖರು ಉಪಸ್ಥಿತರಿದ್ದರು.