ಸುಳ್ಯ: ಕ್ರೀಡೆ ಎಂಬುದು ಯಾವುದೇ ಜಾತಿ, ಧರ್ಮ, ಬೇಧ-ಭಾವ ಇಲ್ಲದೇ ನಡೆಯುವ ಕಾರ್ಯಕ್ರಮವಾಗಿದ್ದು, ಕ್ರೀಡಾ ಸಂಘಟನೆ ಹಾಗೂ ಕ್ರೀಡೆಗಳಿಂದ ಸಮಾಜದಲ್ಲಿ ಒಗ್ಗಟ್ಟು ಹಾಗೂ ಸಾಮರಸ್ಯ ಬೆಳೆಯಲು ಸಾಧ್ಯ ಎಂದು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೆ.ಆರ್. ಹೇಳಿದರು. ಅವರು ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ
ಮಾರ್ನಿಂಗ್ ಕ್ರಿಕೆಟ್ ಕ್ಲಬ್ನ (ಎಂ.ಸಿ.ಸಿ.) ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆ ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನ, ಪ್ರತಿಭೆಗಳನ್ನು ಬೆಳಗಲು ಪೂರಕವಾಗಲಿದೆ. ಸಂಘ ಸಂಸ್ಥೆಗಳು ಊರಿನ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೂ ಕೈಜೋಡಿಸುವ ಕೆಲಸಗಳು ಆಗಲಿ ಎಂದರು.
ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ ಕಾರ್ಯಕ್ರಮ ಉದ್ಘಾಟಿಸಿದರು.ಸುಳ್ಯ ಎಂ.ಸಿ.ಸಿ. ಅಧ್ಯಕ್ಷ ರಂಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ನಟರಾಜ, ಎಂಸಿಸಿ ಗೌರವಾಧ್ಯಕ್ಷ ಗಿರೀಶ್ ಅಡ್ಪಂಗಾಯ, ಎಂಸಿಸಿ ಸಂಚಾಲಕ ರಾಜೇಶ್ ರೈ, ಪ್ರಧಾನ ಕರ್ಯದರ್ಶಿ ಜುಬೇರ್, ಸಂಚಾಲಕ ಸಂತೋಷ್ ಶೆಟ್ಟಿ, ಎಂ.ಬಿ.ಫೌಂಡೇಶನ್ನ ಸಂಚಾಲಕಿ ಹರಿಣಿ ಸದಾಶಿವ, ಟ್ರಸ್ಟಿಗಳಾದ ಪುಷ್ಪಾ ರಾಧಾಕೃಷ್ಣ, ಶರೀಫ್ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು. ರವಿಕುಮಾರ್ ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮ್ಮಾನ:
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ, ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರ ಮಜೀದ್ ಸುಳ್ಯ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರಾದ ಕಿಶನ್ ದ್ರಾವಿಡ್, ಹೇಮಂತ್ ಕೆ.ವಿ. ಹಾಗೂ ಎಂ.ಸಿ.ಸಿ. ದಿಗ್ಗಜರನ್ನು ಅತಿಥಿಗಳು ಸಮ್ಮಾನಿಸಿ, ಗೌರವಿಸಿದರು.