ಮಂಗಳೂರು: ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.ರಾಜ್ಯ ಸಚಿವ ಸಂಪುಟ ಸಭೆಯನ್ನು ಸೆ.18ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಪ್ರಸ್ತಾವಗಳಿಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ, ಕರಾವಳಿ ಜಿಲ್ಲೆಗಳ ಪ್ರಸ್ತಾವಗಳನ್ನು ಸಿದ್ದಪಡಿಸಿ
ಸಚಿವ ಸಂಪುಟ ಟಿಪ್ಪಣಿ ಮಂಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘ಕೇರಳ, ಗೋವಾ ರಾಜ್ಯಗಳು ಕರಾವಳಿ ಭಾಗವನ್ನು ಬಳಸಿಕೊಂಡಿರುವ ಮಾದರಿಯಲ್ಲೇ ಕರ್ನಾಟಕದಲ್ಲೂ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ಸರ್ಕಾರ ನಿರ್ಧರಿಸಿದ್ದು, ಪ್ರಾಕೃತಿಕ ಸಂಪತ್ತನ್ನು ಸದ್ಬಳಕೆ ಮಾಡಲಾಗುವುದು. ರಾಜ್ಯದ 350 ಕಿ.ಮೀ ಉದ್ದದ
ಕರಾವಳಿಯನ್ನು ಸಮೃದ್ಧ ಪರಿಸರ ಪ್ರವಾಸೋದ್ಯಮ ತಾಣವಾಗಿ ರೂಪಿಸಲಾಗುವುದು. ಅದಕ್ಕಾಗಿ ಮಂಗಳೂರಲ್ಲೇ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದ್ದರು.
ಈಗ ಸಂಪುಟ ಸಭೆಯ ದಿನಾಂಕ ನಿಗದಿಯಾಗಿರುವುದರಿಂದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯೂ ಸೇರಿದಂತೆ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.












