ಸುಳ್ಯ:ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ‘ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ವಥಭವದ ಶೋಭಾ ಯಾತ್ರೆ ಸೆ.8ರಂದು ಅದ್ದೂರಿಯಾಗಿ ನಡೆಯಲಿದೆ ಎಂದು
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಅಪರಾಹ್ನ 2ರಿಂದ ವೀರ ಯುವಕರಿಂದ ಸಾಹಸಮಯ ಅಟ್ಟಿ ಮಡಕೆ ಒಡೆಯುವ ಶೋಭಾ ಯಾತ್ರೆಯು ಚೆನ್ನಕೇಶವ ದೇವಸ್ಥಾನದ ಎದುರಿನಿಂದ ಆರಂಭಗೊಳ್ಳಲಿದೆ. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆಯು
ಚೆನ್ನಕೇಶವ ದೇವಸ್ಥಾನದಿಂದ ಆರಂಭಗೊಂಡು ಎ.ಪಿ.ಎಂ.ಸಿ,ಆಯುರ್ವೇದ ಕಾಲೇಜು ಎದುರು, ಕುರುಂಜಿ ಭಾಗ್,ವೇದಶ್ರೀ ಕಾಂಪ್ಲೆಕ್ಸ್, ಕೆ.ಇ.ಬಿ ಎದುರು, ಅಂಬೆಟೆಡ್ಕ ವೆಹಿಕಲ್ ಕೆಫೆ ಮುಂಭಾಗ,ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಕುರುಂಜಿಕಾರ್ ವೀಸಾ ಆರ್ಕೇಡ್,ರೈ ಇಂಡಿಯನ್ ಗ್ಯಾಸ್ ಕೇಂದ್ರದ ಬಳಿ, ಶಾಸ್ತ್ರಿ ವೃತ್ತ, ಕಶ್ಯಪ ಕಾಂಪ್ಲೆಕ್ಸ್, ಶ್ರೀ ಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಖಾಸಗಿ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಅಟೋ ವರ್ಕ್ಸ್ ಮುಂಭಾಗ, ಭಗವತಿ ಹಾರ್ಡ್ ವೇರ್ಸ್ ಮುಂಭಾಗ ಹಾಗು

ದೇವಸ್ಥಾನದ ಮುಂಭಾಗದಲ್ಲಿ ವಿಶೇಷ ಆಕರ್ಷಣೆಯ ಅಟ್ಟಿ ಮಡಕೆ ಒಡೆಯುವ ಪ್ರದರ್ಶನ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಆಕರ್ಷಕ ಗೊಂಬೆ ಕುಣಿತ, ವಯಲಿನ್, ಸಿಂಗಾರಿಮೇಳ, ಕುಣಿತ ಭಜನಾ ತಂಡಗಳು ಸಾಗಿ ಬರಲಿದೆ ಎಂದು ಅವರು ವಿವರಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮ:
ಸಂಜೆ 6ರಿಂದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಮರ್ಕಂಜ ಶ್ರೀ ಅನ್ನ ಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಔಘಡ್ ಪೀರ್ ಯೋಗಿ ರಾಜೇಶ್ನಾಥ್ ಜೀ ಉದ್ಘಾಟಿಸುವರು. ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥರಾದ ಡಾ.ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಅತಿಥಿಗಳಾಗಿ ಜಿಲ್ಲಾ ಬಜರಂಗದಳ ಸಂಯೋಜಕರಾದ

ನವೀನ್ ಮೂಡುಶೆಡ್ಡೆ, ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಿ.ಆರ್.ಪಲ್ಲತಡ್ಕ ಉಪಸ್ಥಿತರಿರುವರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೆ.ಜಿ ಅಧ್ಯಕ್ಷತೆ ವಹಿಸುವರು.ಈ ಸಂದರ್ಭದಲ್ಲಿ ದೈವ ನರ್ತಕರಾದ ರಾಜೇಶ್ ಪಣಿಕ್ಕರ್ ಮೇನಾಲ ಅವರನ್ನು ಸನ್ಮಾನಿಸಲಾಗುವುದು.
ಎಣ್ಣೆ ಕಂಬ’ಏರುವ ಸ್ಪರ್ಧೆ:
ಅದೇ ದಿನ ಬೆಳಿಗ್ಗೆ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಪ್ರಾಯೋಜಕತ್ವದಲ್ಲಿ ‘ಎಣ್ಣೆ ಕಂಬ’ಏರುವ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಬಹುಮಾನದ ಮೊತ್ತ:
ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ.17,013 ಮತ್ತು ಶಾಶ್ವತ ಫಲಕ, ದ್ವಿತೀಯ ರೂ.12,013 ಮತ್ತು ಶಾಶ್ವತ ಫಲಕ, ತೃತೀಯ ರೂ. 9,013 ಮತ್ತು ಶಾಶ್ವತ ಫಲಕ, ಎಣ್ಣೆ ಕಂಬ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ.5,000 ನೀಡಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೆ.ಜಿ, ಕಾರ್ಯದರ್ಶಿ ವರ್ಷಿತ್ ಚೊಕ್ಕಾಡಿ, ಕೋಶಾಧಿಕಾರಿ ನವೀನ್ ಎಲಿಮಲೆ, ಗೌರವ ಸಲಹೆಗಾರರಾದ ತೀರ್ಥಕುಮಾರ್ ಕುಂಚಡ್ಕ, ಪ್ರಚಾರ ಪ್ರಸಾರ ಪ್ರಮುಖ್ ದೇವಿಪ್ರಸಾದ್ ಅತ್ಯಾಡಿ ಉಪಸ್ಥಿತರಿದ್ದರು.









