*ಗಣೇಶ್ ಮಾವಂಜಿ.
‘ಅವನು ಅಂತವನು ಅಲ್ಲವೇ ಅಲ್ಲ.! ಇಲ್ಲದಿದ್ದರೆ ಅವನು ಹಾಗೆ ಮಾಡುವುದೆಂದರೇನು?. ಅವನ ಗ್ರಹಚಾರ ಸರಿ ಇಲ್ಲದ ಕಾರಣ ಅವನು ಹಾಗೆ ಮಾಡುವುದಷ್ಟೇ…”
“ಹುಡುಗಿ ಒಳ್ಳೆಯವಳೇ…ಆದರೆ ಆಕೆಗೀಗ ಶನಿ ದೆಸೆ. ಹಾಗಾಗಿ ಅವಳ ಬುದ್ಧಿಗೆ ಮಂಕು ಬಡಿದಂತಾಗಿ ತಪ್ಪುಗಳನ್ನೇ ಮಾಡುತ್ತಿದ್ದಾಳೆ. ಅದಕ್ಕಾಗಿ ಅವಳನ್ನು ದೂಷಿಸಿ ಪ್ರಯೋಜನವಿಲ್ಲ…”
“ಅವನು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡಕೊಂಡಿದ್ದ. ಯಾವಾಗ ಕಾಲೇಜು ಮೆಟ್ಟಿಲೇರಿದನೋ ಅಂದಿನಿಂದ ಆತನ ಹಣೆಬರಹವೇ ಕೆಟ್ಟುಹೋಗಿದೆ. ಈ ಬಾರಿಯಂತೂ ಪಿಯುಸಿಯಲ್ಲಿ ಎರಡು ಸಬ್ಜೆಕ್ಟ್ ನಲ್ಲಿ ಡುಮ್ಕಿ ಹೊಡೆದಿದ್ದಾನೆ.ಯಾರೋ
ಅವನಿಗಾಗದವರು ಅವನಿಗೆ ಏನೋ ಮಾಟ-ಮಂತ್ರ ಮಾಡಿರಬೇಕು…”.
“ವಿಷಯ ಎಂತ ಗೊತ್ತುಂಟಾ? ಆ ಮೇಲೆ ಮನೆಯ ಹುಡುಗಿ ಯಾವುದೋ ಅನ್ಯ ಕೋಮಿನ ಯುವಕನ ಜೊತೆ ಓಡಿ ಹೋಗಿದ್ದಾಳಂತೆ. ಸದಾ ನೆಲ ನೋಡಿಕೊಂಡು ಹೋಗುತ್ತಿದ್ದ ಆ ಹುಡುಗಿಗೆ ಭಸ್ಮ ಪ್ರಯೋಗ ಆಗಿರಬೇಕು.ಇಲ್ಲದಿದ್ದರೆ ಅವಳಂತೂ ಅಂತಹ ಕೆಲಸ ಮಾಡುವವಳೇ ಅಲ್ಲ….
ಈ ರೀತಿಯ ಮಾತುಗಳು ನಮ್ಮ ಸುತ್ತಮುತ್ತ ಆಗಾಗ ಕೇಳಿ ಬರುತ್ತಿರುತ್ತವೆ. ಮನಸ್ಸು ಕೆಟ್ಟು, ಬುದ್ಧಿಗೆ ಮಂಕು ಬಡಿದಂತಾಗಿ ವ್ಯಕ್ತಿಯೊಬ್ಬ ತಪ್ಪು ಹೆಜ್ಜೆ ಇರಿಸಿ ಬದುಕಿನಲ್ಲಿ ಅಧಪತನಕ್ಕೆ ಜಾರುವ ಮುನ್ಸೂಚನೆ ಕಂಡು ಬಂದಾಗ ಆತನ ಮನೆಯವರು, ಸಂಬಂಧಿಕರು, ನೆಂಟರಿಷ್ಟರ ಬಾಯಲ್ಲಿ ಇಂತಹ ಮಾತುಗಳು ಕೇಳಿ ಬರುವುದು ಸರ್ವೇ ಸಾಮಾನ್ಯ. ಅದಕ್ಕೆ ಸ್ವತಃ ಅವನೇ ಕಾರಣ ಆಗಿದ್ದರೂ ಅದನ್ನು ಒಪ್ಪಿಕೊಳ್ಳಲು ಆತನಾಗಲೀ, ಆತನ

ಮನೆಯವರಾಗಲೀ ಬಯಸುವುದಿಲ್ಲ. ಒಂದು ವೇಳೆ ಆತನ ಬಂಧುಗಳು ಅವನ ಮುಂದೆಯೇ ಆತನ ತಪ್ಪು ನಡವಳಿಕೆಗೆ ಆತನ ಜಾತಕ ದೋಷ ಕಾರಣ ಅಥವಾ ಆತನ ಹಣೆಬರಹ ಸರಿ ಇಲ್ಲ ಎಂದೇನಾದರೂ ಹೇಳಿದರೆ ಆತ ತಪ್ಪು ಹಾದಿಯಿಂದ ಸರಿ ದಾರಿಯತ್ತ ಮರಳುವ ಬದಲಾಗಿ ಇನ್ನಷ್ಟು ವಕ್ರ ದಾರಿಯಲ್ಲಿ ಸಾಗುತ್ತಾನೆ ಎಂಬುದು ಮಾತ್ರ ಸತ್ಯ.
ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬ ಮಾತಿನಂತೆ ಅವರವರ ಮಕ್ಕಳು ಅವರಿಗೆ ಸದಾ ಮುಗ್ಧರಾಗಿಯೇ ಕಾಣುತ್ತಾರೆ.ತಮ್ಮ ಮಕ್ಕಳು ಕೆಟ್ಟ ಚಟಕ್ಕೆ ಬಿದ್ದರೆ ಅದಕ್ಕೆ ಸಹವಾಸ ದೋಷ ಕಾರಣ ಎಂದು ದೂರುವ ಪೋಷಕರು ತಮ್ಮ ಮಕ್ಕಳೂ ದಾರಿ ತಪ್ಪಿರಬಹುದು ಎಂದು ಯೋಚಿಸುವುದೇ ಇಲ್ಲ. ಮಕ್ಕಳ ಮೇಲಿನ ಅತೀವ ಮಮಕಾರ ಅವರನ್ನು ಆ ರೀತಿ ಯೋಚಿಸುವಂತೆ ಮಾಡುತ್ತದೆ.
ಸದಾ ಓದಿನಲ್ಲಿ ಮುಂದಿದ್ದ ಮಗು ಅದ್ಯಾವುದೋ ವೈಯಕ್ತಿಕ ಕಾರಣಕ್ಕಾಗಿ ಕಲಿಕೆಯಲ್ಲಿ ಹಿಂದುಳಿದರೆ ಅದಕ್ಕೆ ಅನ್ಯರ ವಕ್ರ ದೃಷ್ಟಿ ಕಾರಣ ಎಂದೇ ನಂಬಲಾಗುತ್ತದೆ. ಆಡು ಭಾಷೆಯಲ್ಲಿ ಅದಕ್ಕೆ ‘ಕಣ್ಣು ಮುಟ್ಟಿಸುವುದು’ ಎನ್ನುತ್ತಾರೆ. ಈ ದೃಷ್ಟಿಯ ದುಷ್ಪರಿಣಾಮ ತಡೆಯಲು ಮಂತ್ರಿಸಿದ ನೂಲು, ತಾಯಿತ, ಭಸ್ಮದ ಮೊರೆ ಹೋಗುವವರು ಈಗಲೂ ಇದ್ದಾರೆ ಎಂದರೆ ನಂಬಲೇ ಬೇಕು!
ವ್ಯಕ್ತಿಯೊಬ್ಬನ ತಪ್ಪಿಗೆ ಆತನ ಹಣೆಬರಹ ಸರಿ ಇಲ್ಲ ಎಂದು ಆತನ ಮುಂದೆಯೇ ಆತನ ತಪ್ಪಿಗೆ ಲೇಬಲ್ ಹಚ್ಚಿದರೆ ಆತ ಖಂಡಿತವಾಗಿಯೂ ಆ ತಪ್ಪಿನಿಂದ ಹೊರಗೆ ಬರಲಾರ. ಕುಡಿತದ ಚಟ ಹೊಂದಿದ ವ್ಯಕ್ತಿಯ ಮುಂದೆ ‘ಆತ ಹಿಂದೆಲ್ಲಾ ಕುಡಿಯುತ್ತಿರಲಿಲ್ಲ. ಯಾರೋ ಏನೋ ಮಾಡಿರಬೇಕು’ ಎಂದು ಬಿಟ್ಟರೆ ಆತ ಮತ್ತಷ್ಟು ಕುಡಿದು ಮಹಾ ಕುಡುಕನಾಗುತ್ತಾನೆ. ಯಾರಾದರೂ ಬುದ್ಧಿ ಮಾತು ಹೇಳಿದರೂ ‘ನನಗೆ ಯಾರೋ ಏನೋ ಮಾಡಿದ್ದಾರೆ. ಹಾಗಾಗಿ ಕುಡಿತ ಬಿಡಲು ನನಗೆ ಮನಸ್ಸೇ ಬರುವುದಿಲ್ಲ’ ಎಂದು ತನ್ನ ಕುಡಿತಕ್ಕೆ ಇನ್ಯಾರೋ ಕಾರಣ ಎಂಬ ಅಭಿಪ್ರಾಯಕ್ಕೆ ಅಂಟಿಕೊಳ್ಳುತ್ತಾನೆ.
ಪ್ರಾಥಮಿಕ ಶಾಲೆಯಲ್ಲಿ ಚೆನ್ನಾಗಿ ಕಲಿಯುತ್ತಿದ್ದ ಮಕ್ಕಳು ಹೈಸ್ಕೂಲ್ ಗೆ ಕಾಲಿಟ್ಟಂತೆ ಓದಿನಲ್ಲಿ ಹಿಂದುಳಿದರೆ ಅದಕ್ಕೆ ಕಾರಣ ಏನಾಗಿರಬಹುದು? ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವ ಕೆಲಸವನ್ನು ಪೋಷಕರು ಮಾಡಬೇಕು. ಹದಿಹರೆಯಕ್ಕೆ ಕಾಲಿಟ್ಟಂತೆ ಮಕ್ಕಳ ದೈಹಿಕ ಸ್ಥಿತಿಗತಿ ಬದಲಾದಂತೆ ಮಾನಸಿಕ ಪರಿಸ್ಥಿತಿಗಳೂ ಬದಲಾಗುತ್ತವೆ. ಈ ಹಂತದಲ್ಲಿ ಮಕ್ಕಳು ಓದಿನತ್ತ ಏಕಾಗ್ರತೆ ಕಳೆದುಕೊಳ್ಳುವುದು ಸಾಮಾನ್ಯ. ಈ ಹಂತದಲ್ಲಿ ಮಕ್ಕಳು ದಾರಿ ತಪ್ಪಲು ಕಾರಣವಾಗುವ ಅಂಶಗಳನ್ನು ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕೇ ಹೊರತು ಅದಕ್ಕಾಗಿ ದೃಷ್ಟಿ ತೆಗೆಯವುದೋ, ಮಾಟ ಮಂತ್ರದ ಪರಿಣಾಮ ತಡೆಯಲು ಇನ್ನೇನೆನೋ ಕ್ರಿಯೆಗಳನ್ನು ನಡೆಸಿ ಇನ್ನು ನನ್ನ ಮಕ್ಕಳು ಸರಿಯಾಗುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನದ ಪರಮಾವಧಿ ಎಂದೇ ಹೇಳಬಹುದು.
ಮನಸ್ಸಿನ ಖುಷಿಗಾಗಿ ಅಥವಾ ಆತ್ಮಧೈರ್ಯ ಹೆಚ್ಚಿಸಿಕೊಳ್ಳಲು ದೇವರ ಮೊರೆ ಹೋದರೆ ತಪ್ಪಲ್ಲ. ಆದರೆ ಅದೇ ಪೂಜಾ ಕೈಂಕರ್ಯಗಳಿಂದ ವ್ಯಕ್ತಿಯ ಸಂಕಷ್ಟಗಳಾಗಲೀ, ಅಂಟಿಕೊಂಡ ಚಟಗಳಾಗಲೀ ದೂರ ಸರಿಯುವುದು ಕನಸಿನ ಮಾತೇ ಸರಿ.
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಈಗಲೂ ಮಾಟ, ಮಂತ್ರ, ಭಸ್ಮ ಪ್ರಯೋಗ ಮುಂತಾದ ಮೂಢ ನಂಬಿಕೆಗಳನ್ನು ಬಲವಾಗಿ ನಂಬಿಕೊಂಡು ವ್ಯಕ್ತಿಯೊಬ್ಬನ ಅವನತಿಗೆ ಅವುಗಳೇ ಕಾರಣ ಎಂದು ಷರಾ ಬರೆಯುವವರಿದ್ದಾರೆ. ಹುಡುಗಿಯೊಬ್ಬಳ ಪ್ರೇಮ ಪ್ರಸಂಗಕ್ಕೆ ಭಸ್ಮ ಪ್ರಯೋಗವೇ ಕಾರಣ ಎಂದು ಹಣೆಪಟ್ಟಿ ಕಟ್ಟುವವರೂ ಇದ್ದಾರೆ. ಪ್ರಾಥಮಿಕ ತರಗತಿಯಲ್ಲಿ ಕಲಿಯಲು ಅಷ್ಟಕಷ್ಟೇ ಎಂಬಂತಿದ್ದ ಹುಡುಗನೊಬ್ಬ ಹೈಸ್ಕೂಲ್, ಕಾಲೇಜಿನ ಹಂತದಲ್ಲಿ ಆತನ ಛಲದಿಂದ, ಕಠಿಣ ಪರಿಶ್ರಮದಿಂದ ಉತ್ತಮ ಅಂಕ ಪಡೆಯುವಂತಾದರೆ ಅದಕ್ಕೆ ಯಾವುದೋ ಕ್ಷೇತ್ರದ ಪ್ರಸಾದದ ಮಹಿಮೆ ಎಂದು ಬಣ್ಣಿಸುವವರೂ ಇದ್ದಾರೆ.
ಎಲ್ಲದಕ್ಕೂ ಹಣೆಬರಹವನ್ನು ದೂಷಿಸಿದರೆ ವ್ಯಕ್ತಿಯ ಪ್ರಯತ್ನಕ್ಕೆ ಬೆಲೆಯೇ ಇರುವುದಿಲ್ಲ. ಛಲದಿಂದ ಮುಂದುವರಿದು ಬಾಳಿನಲ್ಲಿ ಅಂದುಕೊಂಡ ಗುರಿಯತ್ತ ತಲುಪಿದಾಗ ಅದಕ್ಕೆಲ್ಲಾ ಆತನ ಅದೃಷ್ಟ ಕಾರಣ ಎಂದು ಷರಾ ಎಳೆದುಬಿಟ್ಟರೆ ಆತನ ಛಲಕ್ಕೆಲ್ಲಿದೆ ಬೆಲೆ? ವ್ಯಕ್ತಿಯೊಬ್ಬ ಸೋತು ಪಾತಾಳಕ್ಕೆ ತಳ್ಳಲ್ಪಟ್ಟಾಗ ‘ನಿನಗದು ಆಗುವಂತದ್ದಲ್ಲ. ನಿನ್ನ ಹಣೆಯಲ್ಲಿ ಅದು ಬರೆದಿಲ್ಲ’ ಎಂಬಂತಹ ಮಾತುಗಳು ಬಂದು ಬಿಟ್ಟರೆ ಮತ್ತೆ ಸಾಧಿಸಿಯೇ ತೀರುತ್ತೇನೆ ಎಂಬ ಛಲದ ಜಾಗದಲ್ಲಿ ಸಂದೇಹ, ಹೆದರಿಕೆ, ಕೀಳರಿಮೆ, ದ್ವಂದ್ವ ನಿಲುವುಗಳು ಮನೆ ಮಾಡುತ್ತವೆ. ಸೋಲೇ ಗೆಲುವಿನ ಮೂಲ, ನಡೆಯುವವರು ಎಡವದೆ ಕುಳಿತವರು ಎಡಹುವರೇ?, ‘ಒಮ್ಮೆ ಸೋತರೇನಂತೆ..,ಮರಳಿ ಯತ್ನವ ಮಾಡಿದರೆ ಗೆಲುವು ಖಂಡಿತಾ
ನಿನ್ನದಾಗುತ್ತದೆ’ ಎಂಬಂತಹ ಹುರಿದುಂಬಿಸುವ ಮಾತುಗಳು ಬಂದರೆ ಅದೇ ವ್ಯಕ್ತಿಗೆ ಸಾಧಿಸುವ ಛಲ ಮತ್ತೆ ಉಕ್ಕುಕ್ಕಿ ಬರದಿರಲಾರದು.
‘ದೆಸೆ ಸರಿ ಇಲ್ಲ’, ‘ಆತನ ಹಣೆಯಲ್ಲಿ ಬರೆದದ್ದೇ ಅಷ್ಟು’, ‘ಆಕೆಯ ವಿಧಿ ಬರಹ ಹಾಗಿತ್ತು’…, ಎಂಬೆಲ್ಲಾ ಮಾತುಳಿಗೆ ಬದಲಾಗಿ ‘ಸೋಲಿಗೆ ಮತ್ತೆ ಮತ್ತೆ ಸೋಲಿಸುವ ಧೈರ್ಯ ಇರುವುದಿಲ್ಲ’, ‘ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ’, ‘ದುಶ್ಚಟಕ್ಕೆ ಅಂಟಿಕೊಂಡರೆ ದೇವರಿಂದಲೂ ರಕ್ಷಿಸಲಾಗದು’ ಎಂಬಂತಹ ಸತ್ಯ ಮನವರಿಕೆಯಾದರೆ ಬಾಳಿನಲ್ಲಿ ಎದುರಾಗುವ ಯಾವುದೇ ಕಷ್ಟಗಳನ್ನು, ಸಮಸ್ಯೆಗಳನ್ನು ಸುಲಭವಾಗಿ ಜಯಿಸುವಂತಾಗುತ್ತದೆ.












