ಮಂಞಡುಕ: ಕರಿಕೆ ಮಂಞಡುಕ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು. ಫೆ.27ರಿಂದ ಆರಂಭಗೊಂಡು 8 ದಿನಗಳ ಕಾಲ ನಡೆದ ಕಳಿಯಾಟ ಮಹೋತ್ಸವದ ಕೊನೆಯ ದಿನವಾದ ಮಾ.6ರಂದು ಶ್ರೀ ತುಳೂರ್ ವನತ್ ಭಗವತಿ ಅಮ್ಮ ಮತ್ತು ಶ್ರೀ ಕ್ಷೇತ್ರಪಾಲಕನೀಶ್ವರ ಭಕ್ತರನ್ನು ಹರಸಿತು. ಸಂಜೆ ಭಗವತಿಯ ಮುಡಿ ಅವರೋಹಣ ಆಗುವುದರೊಂದಿಗೆ
ಜಾತ್ರೋತ್ಸವ ಸಮಾಪನಗೊಂಡಿತು. ಮಾ.5ರಂದು ಶ್ರೀ ಮುನ್ನಾಯರೀಶ್ವರ ದೈವ ಭಕ್ತರ ಹರಸಿತು. ದಕ್ಷಿಣ ಕನ್ನಡ,ಕೊಡಗು, ಕಾಸರಗೋಡು ಜಿಲ್ಲೆಗಳ ಗಡಿ ಪ್ರದೇಶವಾದ ಮಂಞಡುಕದ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರ ಕೇರಳ ಹಾಗು ಕರ್ನಾಟಕದ ಭಕ್ತರು ಆರಾಧಿಸುವ ಕಾರಣಿಕ ಕ್ಷೇತ್ರವಾಗಿದೆ.

ಮಹಾ ಶಿವರಾತ್ರಿಯ ದಿನ ಅರ್ಧ ರಾತ್ರಿಯ ವೇಳೆ ಕ್ಷೇತ್ರದ ತೆಂಕಿನ ಬಾಗಿಲು ತೆರೆದು ಮರುದಿನ ಆರಂಭಗೊಂಡು ಪ್ರತಿ ವರ್ಷ ಎಂಟು ದಿನಗಳ ಕಾಲ ನಡೆಯುವ ಕಳಿಯಾಟ ಮಹೋತ್ಸವದಲ್ಲಿ 101 ದೈವ ಕೋಲ ನಡೆಯುತ್ತದೆ. ಜಾತ್ರೋತ್ಸವಕ್ಕೆ ಕೇರಳ ಹಾಗು ಕರ್ನಾಟಕ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸಿದ್ದರು.