ಅಜ್ಜಾವರ:ಅಜ್ಜಾವರದ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಾತಾ ಸಭಾಭವನದ ಲೋಕಾರ್ಪಣಾ ಸಮಾರಂಭ ಮೇ.14ರಂದು ನಡೆಯಲಿದೆ. ಶೃಂಗೇರಿ ಮಠಾಧೀಶರಾದ ವಿಧುಶೇಖರಭಾರತೀ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ
ಸಂದರ್ಭದಲ್ಲಿ ಮಹಿಷಮರ್ದಿನಿ ದೇವಸ್ಥಾಕ್ಕೆ ಸರಕಾರದಿಂದ ರೂ.60 ಲಕ್ಷ ಅನುದಾನ ಮಂಜೂರುಗೊಂಡಿತ್ತು. ಈ ಅನುದಾನದಲ್ಲಿ ದೇವಸ್ಥಾನದಲ್ಲಿ ಸುಸಜ್ಜಿತವಾದ ಸಭಾಭವನವನ್ನು ನಿರ್ಮಾಣಮಾಡಲಾಗಿದೆ.
ಮೇ.14ರಂದು ಬೆಳಗ್ಗೆ 7 ಗಂಟೆಗೆ ಸಭಾಭವನದಲ್ಲಿ ಮಹಾಗಣಪತಿ ಹೋಮ ನಡೆಯುವುದು.ಬೆಳಗ್ಗೆ 9.30ರಿಂದ ಶ್ರೀ ಜಗದ್ಗುರುಗಳಿಂದ ಶ್ರೀ ಮಹಿಷಮರ್ದಿನೀ ದೇವರ ಪ್ರಸನ್ನ ಪೂಜೆ, ಬೆಳಗ್ಗೆ 10.30 ಕ್ಕೆ ಶ್ರೀಮಾತಾ ಸಭಾಭವನದ ಉದ್ಘಾಟನೆ ನಡೆಯುವುದು. ಬಳಿಕ ಸಭಾ ಕಾರ್ಯಕ್ರಮ ನಡೆಯುವುದು. ಸಮಾರಂಭದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಪಂಜ ಭಾಗವಹಿಸಲಿದ್ದಾರೆ.













