ಎಲಿಮಲೆ:ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಒಂದು ವಾರಗಳ ಕಾಲ ನಡೆಯುವ ಸಾಹಿತ್ಯ ಸಂಭ್ರಮಕ್ಕೆ ನ.1ರಂದು ಚಾಲನೆ ದೊರೆಯಿತು.ಮೊದಲ ಕಾರ್ಯಕ್ರಮವಾಗಿ ಕಸಾಪ ಹಾಗು ಕಸಾಪ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ
ಎಲಿಮಲೆ ಸ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಪಂಜ ಹೋಬಳಿ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯುತು. ದ.ಕ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಆಸಕ್ತಿ ಹುಟ್ಟಲು ಈ ರೀತಿಯ ಸಾಹಿತ್ಯ ಸಮ್ಮೇಳನಗಳು ಪೂರಕ ಎಂದು ಅವರು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗುತ್ತಿಗಾರು ಸ.ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಘ ಹೊಸೊಳಿಕೆ ಮಾತನಾಡಿ ಸಾಹಿತ್ಯ ಸಮ್ಮೇಳನವು ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಲು ಮತ್ತು ಹೊಸ ಹೊಸ ಬರಹಗಾರರ ಸೃಷ್ಠಿಗೆ ಸಹಾಯಕವಾಗಲಿದೆ. ಮಕ್ಕಳು ಉತ್ತಮ ಓದುಗನಾಗಿ ಉತ್ತಮ ಬರಹಗಾರನಾಗಬೇಕು ಎಂದು ಹೇಳಿದರು.
ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ದೇವಚಳ್ಳ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಯಾನಂದ ಪಟ್ಟೆ, ಕನ್ನಡ ಧ್ವಜಾರೋಹಣವನ್ನು ರಾಜ್ಯ ಮೀನುಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ ನೆರವೇರಿಸಿದರು. ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದೀಕ್ಷಾ ಪಿ.ದಿಕ್ಸೂಚಿ ಭಾಷಣ ಮಾಡಿದರು. ವಳಲಂಬೆ

ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ, ದೇವಚಳ್ಳ ಸಹಿಪ್ರಾ.ಶಾಲಾ ಮುಖ್ಯ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ ಉಪಸ್ಥಿತರಿದ್ದರು. ಕಸಾಪ ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಕಾರ್ಯಕ್ರಮ ಸಂಯೋಜಕ ಯೋಗೀಶ್ ಹೊಸೊಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ರೈತಗೀತೆ ಹಾಡಿದರು.
ಬಾಬು ಗೌಡ ಅಚ್ರಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಲಾವಣ್ಯ.ಡಿ.ಎಸ್. ವಂದಿಸಿದರು. ಕು.ಹಸ್ತಾ ಕೆ.,ಸಾಯಿ ಸುನಿಷ್ಠ, ಚರಿಷ್ಮಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿ ಕವಿಗೋಷ್ಠಿ, ವಿದ್ಯಾರ್ಥಿ ಚರ್ಚಾಗೋಷ್ಠಿ, ಗೀತಗಾಯನ ನಡೆದು ಸಂಜೆ ಸಮಾರೋಪ ಸಮಾರಂಭ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.









