ಕಲ್ಲಪಳ್ಳಿ: ಕಾಞಂಗಾಡ್- ಪಾಣತ್ತೂರು- ಸುಳ್ಯ ಅಂತಾರಾಜ್ಯ ಮಾರ್ಗದಲ್ಲಿ, ಕೇರಳದ ಸರ್ಕಾರಿ ಬಸ್ ಓಡಾಟ ನಡೆಸುವ ಕುರಿತು ಜನಪ್ರತಿನಿಧಿಗಳು ಹಾಗೂ ಪ್ರಮುಖರು ಕೆಎಸ್ಆರ್ಟಿಸಿ ಅಧಿಕಾರಿಗಳ ಜೊತೆ ಕಾಂಞಂಗಾಡ್ ಸಬ್ ಡಿಪೋ ದಲ್ಲಿ ಜೂ.29ರಂದು ಚರ್ಚೆ ನಡೆಸಿದರು. ಜುಲೈ 1ರಿಂದ ಈ ಮಾರ್ಗದಲ್ಲಿ ಮೂರನೇ ಬಸ್ ಸರ್ವೀಸ್ ಆರಂಭಿಸಲು ನಿರ್ಧರಿಸಲಾಯಿತು. ಬಸ್ ಬೆಳಿಗ್ಗೆ 8.20ಕ್ಕೆ ಕಾಞಂಗಾಡಿನಿಂದ
ಹೊರಡಲಿದೆ, ಪಾಣತ್ತೂರಿನಿಂದ 9.50ಕ್ಕೆ ಸುಳ್ಯಕ್ಕೆ, ಹೊರಟು 10.50ಕ್ಕೆ ಸುಳ್ಯ ತಲುಪಿ ಪುನಃ ಸುಳ್ಯದಿಂದ 11:10ಕ್ಕೆ ಹೊರಟು ಪಾಣತ್ತೂರು ಮಾರ್ಗವಾಗಿ ಕಾಂಞಂಗಾಡ್ಗೆ ಪ್ರಯಾಣಿಸಲು ಸಮಯ ನಿಗದಿ ಮಾಡಲಾಗಿದೆ ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ತಿಳಿಸಿದ್ದಾರೆ. ಕಾಞಂಗಾಡ್-ಪಾಣತ್ತೂರು- ಸುಳ್ಯ ಮಾರ್ಗದಲ್ಲಿ 5 ಬಸ್ ಸರ್ವೀಸ್ ನಡೆಸಲು ಅನುಮತಿ ಇದೆ. ಎರಡು ಬಸ್ ಈಗಾಗಲೇ ಸರ್ವೀಸ್ ನಡೆಸುತಿದೆ. ಇದೀಗ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಮೂರನೇ ಬಸ್ ಓಡಾಟ ನಡೆಸಲು ಕೆಎಸ್ಆರ್ಟಿಸಿ ಒಪ್ಪಿಗೆ ನೀಡಿದೆ.
ಸಭೆಯಲ್ಲಿ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ಮಾಜಿ ಪನತ್ತಡಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ ತಂಬಾನ್, ಅಸಿಸ್ಟೆಂಟ್ ಟ್ರಾನ್ಸ್ಪೋರ್ಟ್ ಆಫೀಸರ್ ಅಲ್ಭಿನ್, ಕಂಟ್ರೋಲಿಂಗ್ ಆಫೀಸರ್ ಕೃಷ್ಣನ್, ಕಾರ್ಮಿಕರ ಸಂಘದ ಜಿಲ್ಲಾ ನೇತಾರ ಸಂತೋಷ್ ಕುಮಾರ್, ಊರಿನ ಪ್ರಮುಖರಾದ, ಬಾಬಣ್ಣ, ಜ್ಞಾನೇಶ್ ಇವರು ಪಾಲ್ಗೊಂಡಿದ್ದರು.