ಸುಳ್ಯ: ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿರುವುದು ತನ್ನನ್ನು ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಆಯ್ಕೆ ಮಾಡಿರುವ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗೆ ಸಂದ ಗೌರವ ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ‘ಕಮಿಟಿ ಬಿ’ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಅಧ್ಯಕ್ಷ ಕೆಂಚಪ್ಪ ಗೌಡರ ನೇತೃತ್ವದ
ತಂಡ ಬಹುಮತ ಪಡೆದು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷನಾಗಿ ಎರಡನೇ ಬಾರಿ ಆಯ್ಕೆಯಾಗಿರುವುದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಒಕ್ಕಲಿಗರ ಸಂಘದ ವತಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಲಯ ಮಾಡುವ ಉದ್ದೇಶ ಹೊಂದಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಈಗಾಗಲೇ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಸ್ಥಳ ಖರೀದಿ ಮಾಡಲಾಗಿದೆ. ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸ್ಥಳ ಖರೀದಿ ಮಾಡಲಾಗುವುದು. ಆಧುನಿಕ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳ
ಅಭಿವೃದ್ಧಿಗೆ ಒಕ್ಕಲಿಗರ ಸಂಘ ಆದ್ಯತೆ ನೀಡುತ್ತದೆ. ಎಲ್ಲರಿಗೂ ಸಮಾನ ರೀತಿಯ ಅವಕಾಶ ನೀಡಲಾವುದು. ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿದ ಅನುಭವದ ಹಿನ್ನಲೆಯಲ್ಲಿ ಒಕ್ಕಲಿಗರ ಸಂಘದ ಎಲ್ಲಾ ಕೆಲಸ ಕಾರ್ಯಗಳಿಗೆ ತನ್ನ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಡಾ.ರೇಣುಕಾ ಪ್ರಸಾದ್ ಅವರು ಹೇಳಿದ್ದಾರೆ.
ಭಾನುವಾರ ನಡೆದ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಅವರು ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಒಕ್ಕಲಿಗರ ಸಂಘದ ನಿರ್ದೇಶಕರಾಗಿ 4 ಬಾರಿ ಆಯ್ಕೆಯಾಗಿದ್ದರು. 3 ಅವಧಿಗೆ ಅವಿರೋಧವಾಗಿ ಮತ್ತು
ನಾಲ್ಕನೇ ಅವಧಿಗೆ ಬಹುಮತದಿಂದ ಚುನಾಯಿತರಾಗಿದ್ದ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿ
ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ನಡೆದ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ ಡಾ. ರೇಣುಕಾಪ್ರಸಾದ್ ಕೆ.ವಿ. ಯವರು 21-14 ಮತಗಳ ಅಂತರದಿಂದ ಉಪಾಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಕೆಂಚಪ್ಪ ಗೌಡ, ಕಾರ್ಯದರ್ಶಿಯಾಗಿ ಕೋನಪ್ಪ ರೆಡ್ಡಿ ಮತ್ತು ಜೊತೆ ಕಾರ್ಯದರ್ಶಿಯಾಗಿ ಹನುಮಂತರಾಯಪ್ಪ, ನೆಲ್ಲಿಗೆರೆ ಬಾಲಕೃಷ್ಣ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.