ಸುಳ್ಯ:ನಮ್ಮ ಭಾಷೆಯು ಸಂವಹನಕ್ಕೆ ಪೂರಕವಾಗುವುದರ ಜೊತೆಗೆ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಹೃದಯ- ಹೃದಯಗಳನ್ನು ಬೆಸೆಯುತ್ತದೆ ಎಂದು ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಸಾಹಿತಿ ಶೈಲಜಾ ದಿನೇಶ್ ಹೇಳಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸ್ಥಾಪನಾ ದಿನದ ಅಂಗವಾಗಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ಆಶ್ರಯದಲ್ಲಿ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ, ತರುಣ ಘಟಕ ನಗರ ಸಮಿತಿ ಮತ್ತು
ಮಹಿಳಾ ಸಮಿತಿಯ ಸಹಕಾರದಲ್ಲಿ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆದ ‘ಅರೆಭಾಷೆ ದಿನಾಚರಣೆ’ಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ನಾವು ಕಲಿತ ಭಾಷೆ ಎಂದೂ ನಮ್ಮನ್ನು ಕೈ ಬಿಡುವುದಿಲ್ಲ, ನಮ್ಮ ಮಾತೃ ಭಾಷೆಯನ್ನು ಸ್ಪಷ್ಟವಾಗಿ, ಗಟ್ಟಿಯಾಗಿ ಮಾತನಾಡಲು ಯಾವುದೇ ಅಳುಕು ಬೇಡ ಎಂದ ಅವರು ಅಕಾಡೆಮಿ ಸ್ಥಾಪನೆ ಆದ ಬಳಿಕ ಅರೆ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚು ಸಹಾಯಕವಾಗಿದೆ. ಭಾಷೆ ಹೆಚ್ಚು ವ್ಯಾಪಿಸಲು ಸಾಹಿತ್ಯದ ಜೊತೆಗೆ ಕಲಾ ಮಾಧ್ಯಮವೂ ಮುಖ್ಯ. ಅದಕ್ಕಿಂತ ಮುಖ್ಯವಾಗಿ ಭಾಷೆಯನ್ನು ಮಾತಮಾಡುವ ಮೂಲಕ ಮತ್ತು ಮಕ್ಕಳಿಗೆ ಕಲಿಸುವ ಮೂಲಕ ಬೆಳೆಸಬೇಕು. ಆಧುನಿಕ ಮಾಧ್ಯಮಗಳನ್ನು ಬಳಸಿ ಜಾಗತಿಕ ಮಟ್ಟದಲ್ಲಿ ಭಾಷೆಯನ್ನು ಬೆಳೆಸುವ ಪ್ರಯತ್ನ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಇಂಜಿನಿಯರ್ ಡಿ.ಎಂ.ಸುಮಿತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷರಾದ ಕೆ.ಸಿ.ಸದಾನಂದ ಕುರುಂಜಿ, ಮೋಹನ್ ರಾಮ್ ಸುಳ್ಳಿ ಮುಖ್ಯ ಅತಿಥಿಗಳಾಗಿದ್ದರು. ಅರೆಭಾಷೆ ಬೆಳವಣಿಗೆಗೆ ಸಹಕರಿಸಿದ ಉದ್ಯಮಿ ಎಸ್.ಅಬ್ದುಲ್ಲ ಕಟ್ಟೆಕ್ಕಾರ್ಸ್, ಗಾಯಕ,ಕೆ.ಆರ್. ಗೋಪಾಲಕೃಷ್ಣ ಪತ್ರಕರ್ತ ಹರೀಶ್ ಬಂಟ್ವಾಳ್, ಜಯರಾಮ ಅಜಿಲ, ಸಾವಿತ್ರಿ ಕಣೆಮರಡ್ಕ, ಉದಯಭಾಸ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಅರೆಭಾಷೆ ಅಕಾಡೆಮಿಯ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಪಿ.ಎಸ್.ಕಾರ್ಯಪ್ಪ, ಲತಾ ಪ್ರಸಾದ್ ಕುದ್ಪಾಜೆ, ಕಾರ್ಯಕ್ರಮದ ಸಂಘಟಕರಾದ ದಿನೇಶ್ ಮಡಪ್ಪಾಡಿ, ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು,ಗೌಡ ನಗರ ಸಮಿತಿ ಅಧ್ಯಕ್ಷ ರಾಕೇಶ್ ಕುಂಠಿಕಾನ, ನಗರ ಮಹಿಳಾ ಸಮಿತಿ ಅಧ್ಯಕ್ಷೆ ಹರ್ಷ ಕರುಣಾಕರ,ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಸಂಚಾಲಕಿ ಲತಾ ಪ್ರಸಾದ್ ಕುದ್ಪಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ಎಂ.ಜೆ ಕಾರ್ಯಕ್ರಮ ನಿರೂಪಿಸಿದರು.
ಅರೆಭಾಷೆ ದಿನಾಚರಣೆಗೆ ಬೆಳಿಗ್ಗೆ ನಿವೃತ್ತ ಅರಣ್ಯ ಪಾಲಕ ಅಮೈ ಸುಂದರ ಗೌಡ ಚಾಲನೆ ನೀಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅರೆಭಾಷೆ ಹಾಡು, ವಿವಿಧ ತಂಡಗಳಿಂದ ನೃತ್ಯ ಪ್ರದರ್ಶನ, ರೂಪಕ, ಮಿಮಿಕ್ರಿ, ಪೊಳ್ಮೆ, ಪದ್ಯ ಬಂಡಿ, ಸಾಂಪ್ರದಾಯಿಕ ಉಡುಗೆ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆಯಿತು.