ಕನಕಮಜಲು:ಕಾರೊಂದು ಢಿಕ್ಕಿ ಹೊಡೆದು ಪಾದಾಚಾರಿ ವ್ಯಕ್ತಿಗಳಿಬ್ಬರು ಗಂಭೀರ ಗಾಯಗೊಂಡ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯಿಂದ ವರದಿಯಾಗಿದೆ. ಡಿಕ್ಕಿ ಹೊಡೆದ ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿದೆ.ಗಾಯಗೊಂಡ ಓರ್ವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕನಕಮಜಲಿನಲ್ಲಿ
ನಡೆದ ಏಕಾಹ ಭಜನೆಗೆ ಜನಾರ್ದನ ಶೆಟ್ಡಿ ಹಾಗೂ ರಾಮ ಶೆಟ್ಟಿ ಅವರು ಮುಖ್ಯರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರೊಂದು ವೇಗವಾಗಿ ಬಂದು ಇವರಿಬ್ಬರಿಗೆ ಢಿಕ್ಕಿ ಹೊಡೆದಿದೆ. ರಸ್ತೆ ಬದಿಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಇವರಲ್ಲಿ ತಲೆಗೆ ಗಂಭೀರ ಗಾಯಗೊಂಡ ಜನಾರ್ದನ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.ಕಾರು ಚಾಲಕ ಇಬ್ಬರಿಗೆ ಢಿಕ್ಕಿ ಹೊಡೆದು ನಿಲ್ಲಿಸದೇ, ಪರಾರಿಯಾಗಿದೆ ಎಂದು ತಿಳಿದುಬಂದಿದೆ.