ತ್ರಿಶ್ಯೂರ್:ಕೇರಳದ ಪ್ರಸಿದ್ಧ ತ್ರಿಶ್ಯೂರ್ ಪೂರಂ ಉತ್ಸವಕ್ಕಾಗಿ ಮುಂಡತ್ತಿಕೋಡ್ ಎಂಬಲ್ಲಿ ಪಟಾಕಿ ತಯಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಮಂಗಳವಾರ ಸ್ಫೋಟ ಸಂಭವಿಸಿ 12 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ತ್ರಿಶ್ಯೂರ್ ಪೂರಂ ಉತ್ಸವದ ‘ಮಾದರಿ ಸಿಡಿಮದ್ದು ಪ್ರದರ್ಶನ’ ಏಪ್ರಿಲ್ 24ರಂದು ನಡೆಯಲಿದೆ. ಇದಕ್ಕಾಗಿ ಕಾರ್ಮಿಕರು ಮುಂಡತ್ತಿಕೋಡ್ನ ಭತ್ತದ ಗದ್ದೆಯಲ್ಲಿ ತಾತ್ಕಾಲಿಕ ಶೆಡ್ಗಳನ್ನು
ನಿರ್ಮಿಸಿಕೊಂಡು ಪಟಾಕಿ ತಯಾರಿಸುತ್ತಿದ್ದರು.ಮಧ್ಯಾಹ್ನ 3.30ರ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದೆ. ಆಗ ಶೆಡ್ಗಳಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಶೆಡ್ಗಳು ಕ್ಷಣಮಾತ್ರದಲ್ಲೇ ಉರಿದು ಭಸ್ಮವಾಗಿವೆ.
ಎಂಟು ಕಾರ್ಮಿಕರು ಮೃತಪಟ್ಟಿರುವುದನ್ನು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ದೃಢಪಡಿಸಿದೆ. ಐದು ಮೃತದೇಹಗಳನ್ನು ಗುರುತಿಸಲಾಗಿದೆ.ಮೂರು ಮೃತದೇಹಗಳ ಭಾಗಗಳು ಗುರುತು ಸಿಗದ ರೀತಿಯಲ್ಲಿ ಘಟನೆ ನಡೆದ ಸ್ಥಳದಲ್ಲಿ ಛಿದ್ರಗೊಂಡು ಬಿದ್ದಿದ್ದವು’ ಎಂದು ಮೂಲಗಳು ಹೇಳಿವೆ.
ಬೆಂಕಿ ವ್ಯಾಪಿಸಿದ್ದರಿಂದ ಮತ್ತು ಶೆಡ್ಗಳ ಒಳಗೆ ಸಂಗ್ರಹಿಸಿಟ್ಟ ಸಿಡಿಮದ್ದು ಸ್ಫೋಟಗೊಳ್ಳುತ್ತಲೇ ಇದ್ದಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಯಿತು. ಶೆಡ್ಗಳಿಂದ ಕಾರ್ಮಿಕರನ್ನು ರಕ್ಷಿಸಲು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು ನೆರವಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಡತ್ತಿಕೋಡ್ ಪಟಾಕಿ ತಯಾರಿಕಾ ಘಟಕವು ತ್ರಿಶ್ಯೂರ್ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ. ಸುಟ್ಟ ಗಾಯಗಳಿಂದ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ಮತ್ತು ವಿಶೇಷ ಆರೈಕೆ ಕಲ್ಪಿಸಲು ತ್ರಿಶ್ಯೂರ್ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ.
ತ್ರಿಶ್ಯೂರ್ ಜಿಲ್ಲಾಧಿಕಾರಿ ದುರಂತದ ಕುರಿತು ಮ್ಯಾಜಿಸ್ಟೀರಿಯಲ್ ಹಂತದ ತನಿಖೆಗೆ ಆದೇಶಿಸಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಕಾರ್ಯವಿಧಾನ ರೂಪಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಮೃತರ ಹತ್ತಿರದ ಸಂಬಂಧಿಕರಿಗೆ 2 ಲಕ್ಷ ಪರಿಹಾರವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಘೋಷಿಸಲಾಗಿದೆ. ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.


















