ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಾಲ್ಪಾರಸಲದಲಿ ಕೇರಳದ ಪ್ರವಾಸಿ ವ್ಯಾನ್ವೊಂದು ತಿರುವಿನಲ್ಲಿ ಕಂದಕಕ್ಕೆ ಉರುಳಿ ಬಿದ್ದು, ಅಪಘಾತ ಸಂಭವಿಸಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಚಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ(ಏ. 17) ಸಂಜೆ ಕೊಯಮತ್ತೂರು ವಾಲ್ಪಾರೈ ಘಾಟ್ ವಿಭಾಗದ
13ನೇ ಹೇರ್ ಪಿನ್ ತಿರುವಿನಲ್ಲಿ ವ್ಯಾನ್ ವಾಲ್ಪಾರೈನಿಂದ ಪೊಲ್ಲಾಚಿಗೆ ಇಳಿಯುವಾಗ ವಾಹನವು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಆಳವಾದ ಕಣಿವೆಗೆ ಉರುಳಿ ಬಿದ್ದಿದೆ. ಪರಿಣಾಮ ವ್ಯಾನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ವ್ಯಾನ್ನಲ್ಲಿ ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದರು. ಪ್ರವಾಸಕ್ಕೆ ತೆರಳಿದ್ದ ಕೇರಳದ ಮಲಪ್ಪುರಂ ಪಳ್ಳಿಪರಂಬ್ ಸರಕಾರಿ ಶಾಲೆಯ ಶಿಕ್ಷಕರು ಹಾಗೂ ಇತರರರು ಪ್ರಯಾಣಿಸಿದ್ದ ವಾಹನ ಅಪಘಾತಕ್ಕೀಡಾಯಿತು. ಅಪಘಾತದಿಂದ ಸ್ಥಳದಲ್ಲೇ 8 ಮಂದಿ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎನ್ನಲಾಗಿದೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಮೇಲೆತ್ತಿ ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
















