ಸುಳ್ಯ:ಸುಳ್ಯ ನಗರದ ಶ್ರೀರಾಮ ಪೇಟೆಯಿಂದ ಸರಕಾರಿ ಆಸ್ಪತ್ರೆಯ ಕೆಳಭಾಗವಾಗಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಕಡೆಗೆ ಹೋಗುವ ರಸ್ತೆಯಲ್ಲಿ ನಿರಂತರ ಸ್ವಚ್ಛತಾ ಕಾರ್ಯ ಸದ್ದಿಲ್ಲದೆ ನಡೆಯುತಿದೆ. ಡಾ.ಶ್ರೀಕೃಷ್ಣ ಭಟ್ ನೇತೃತ್ವದಲ್ಲಿ ಚಿಕ್ಕ ತಂಡವೊಂದು ರಸ್ತೆ ಹಾಗು
ಪರಿಸರದಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಹೆಚ್ಚು ಮಳೆ ಇದ್ದ ಸಂದರ್ಭ ಹೊರತು ಪಡಿಸಿ ಪ್ರತಿ ಶುಕ್ರವಾರ ಬೆಳಿಗ್ಗೆ 6.30ರಿಂದ ಸುಮಾರು ಒಂದು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ತಂಡದಲ್ಲಿ ಡಾ.ಶ್ರೀಕೃಷ್ಣ ಭಟ್,ಡಾ. ವಿದ್ಯಾಶಾರದ, ರಾಮಕೃಷ್ಣ ಭಟ್, ಅಚ್ಚುತ ಗೌಡ ಹಾಗು ಮಹಾವಿರ್ ಸಿಂಗ್
ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಎಷ್ಟೇ ಸ್ವಚ್ಛತೆ ನಡೆಸಿದರೂ

ಮತ್ತೆ ಮತ್ತೆ ಪರಿಸರದಲ್ಲಿ ಕಸ ತುಂಬುತ್ತದೆ. ತ್ಯಾಜ್ಯಗಳನ್ನು ರಸ್ತೆಯಲ್ಲಿಯೇ ಎಸೆಯಲಾಗುತಿದೆ. ಕಸ ಎಸೆಯಬಾರದು,ನಮ್ಮ ಮನೆ, ಮನೆಯ ಅಂಗಳದಂತೆಯೇ ನಮ್ಮ ರಸ್ತೆ, ಪರಿಸರ, ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರಬೇಕು ಎಂಬ ಜಾಗೃತಿ ಜನರಲ್ಲಿ ಮೂಡಿದರೆ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದು ಡಾ.ಶ್ರೀಕೃಷ್ಣ ಭಟ್ ಹೇಳುತ್ತಾರೆ.














