ಮಂಗಳೂರು:ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ದೇಶದೆಲ್ಲೆಡೆ ಸಾರ್ಥಕಗೊಳಿಸುವಂತೆ ಪ್ರಧಾನಿ ಮೋದಿ ಅವರು ಈಗಾಗಲೇ ಕರೆ ನೀಡಿದ್ದಾರೆ. ಅದರಂತೆ ದಕ್ಷಿಣ ಕನ್ನಡ ಲೋಕಸಭಾ ವ್ಯಾಪ್ತಿಯ ಎಲ್ಲ ಪಿಎಂ ಆವಾಸ್ ಫಲಾನುಭವಿಗಳ ಯೋಜನೆ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಾಡಿಸುವ ವಿನೂತನ ಪ್ರಯತ್ನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಮುಂದಾಗಿದ್ದಾರೆ.ಮಂಗಳೂರಿನ ಜಪ್ಪಿನಮೊಗರಿನಲ್ಲಿ ಮಂಗಳವಾರ ಬೆಳಗ್ಗೆ ಹರ್ ಘರ್ ಅಭಿಯಾನದಡಿ
ತ್ರಿವರ್ಣ ಧ್ವಜ ಹಾರಾಡಿಸುವ ಮೂಲಕ ಕ್ಯಾ. ಚೌಟ ಅವರು ಚಾಲನೆ ನೀಡಿದರು. ಕ್ಷೇತ್ರದಲ್ಲಿರುವ ಎಲ್ಲ ಪಿಎಂ ಆವಾಸ್ ಗೃಹ ಫಲಾನುಭವಿಗಳನ್ನು ಭೇಟಿಯಾಗಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಿಸುವ ಮೂಲಕ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸುವುದಕ್ಕೆ ನಮ್ಮ ಜನಪ್ರತಿನಿಧಿಗಳು ಮುಂದಾಗುವಂತೆ ಕರೆ ನೀಡಿದ್ದಾರೆ. ಹರ್ ಘರ್ ಅಭಿಯಾನದ ಪ್ರಯುಕ್ತ ನಮ್ಮ ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆ ಸದಸ್ಯರು ಪಿಎಂ ಆವಾಜ್ ಯೋಜನೆ ಫಲಾನುಭವಿಗಳ ಮನೆಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಸಂಖ್ಯೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಿಸುವಂತೆ ಪ್ರೇರಣೆ, ಉತ್ತೇಜನ ನೀಡಬೇಕು. ಆ ಮೂಲಕ ಅವರೊಂದಿಗೆ ಪ್ರಧಾನಿ ಮೋದಿ ಅವರ ವಿಷನ್ ಹಂಚಿಕೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಹರ್ ಘರ್ ತಿರಂಗಾ ಅಭಿಯಾನವು ದೇಶದ ಪ್ರತಿ ಮನೆಯ ಮಕ್ಕಳಲ್ಲಿ ರಾಷ್ಟ್ರೀಯತೆ ಜತೆಗೆ ದೇಶಭಕ್ತಿ ಬೆಳೆಸಲಿದೆ. ಸ್ವಾತಂತ್ರ್ಯ ದಿನಾಚರಣೆ ಎಂಬುದು ಕೇವಲ ಐತಿಹಾಸಿಕ ಆಚರಣೆಯಾಗಬಾರದು. ಉಳಿದ ಎಲ್ಲ ವಾರ್ಷಿಕ ಹಬ್ಬಗಳಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಕೂಡ ದೇಶದೆಲ್ಲೆಡೆ ಔಚಿತ್ಯಪೂರ್ಣ ಹಬ್ಬದ ವಾತಾವರಣ ಉಂಟುಮಾಡಬೇಕು. ಇದನ್ನೇ ನಮ್ಮ ಮುಂದಿನ ತಲೆಮಾರು ಕೂಡ ಎದುರು ನೋಡುತ್ತಿದೆ. ಹೀಗಿರುವಾಗ, ಸ್ವಾಂತ್ರ್ಯ ದಿನಾಚರಣೆ ಯುವ ಸಮುದಾಯಕ್ಕೆ ಆಗಸ್ಟ್ 15 ಸ್ಫೂರ್ತಿ ಮತ್ತು ದೇಶಪ್ರೇಮ ಮೂಡಿಸುವ ಹಬ್ಬವಾಗಬೇಕೆಂದು ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಸ್ಥಳೀಯ ಮ.ನ.ಪಾ ಸದಸ್ಯರಾದ ವೀಣಾ ಮಂಗಳ, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.