ಮಂಗಳೂರು:ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ಹಣ ಜಮೆಯಾಗುತ್ತಿದ್ದು, ಮೃತಪಟ್ಟ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಮರಳಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ದ.ಕ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದರು.ಅವರು ಮಂಗಳವಾರ ದ.ಕ ಜಿಲ್ಲಾ ಪಂಚಾಯತ್ನಲ್ಲಿ
ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಮರಣ ಹೊಂದಿದ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಅನುದಾನ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ರಾಜ್ಯ ಕಛೇರಿಯಿಂದ ತಿಳಿಸಿರುವ ಬಗ್ಗೆ ಅವರು ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಸಹಾಯಧನ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡುವ ಬಗ್ಗೆ ಫಲಾನುಭವಿಗಳ ಮಾಹಿತಿಯನ್ನು ಪಡೆಯಲು ಕ್ರಮವಹಿಸಬೇಕು ಎಂದು ಅವರು ಹೇಳಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ ಸಭೆಗೆ ವರದಿ ಸಲ್ಲಿಸುವಂತೆ ಅಧ್ಯಕ್ಷರು ಸೂಚಿಸಿದರು.ಮೃತ ಫಲಾನುಭವಿಯ ಮರಣ ಪ್ರಮಾಣ ಪತ್ರ ಬಂದ ತಕ್ಷಣ ಫಲಾನುಭವಿಗಳ ಪಟ್ಟಿಯಿಂದ ಹೆಸರನ್ನು ತೆಗೆಯಬೇಕು. ಅವರ ಹೆಸರು, ಬ್ಯಾಂಕ್ ವಿವರಗಳಿದ್ದಲ್ಲಿ ಬ್ಯಾಂಕ್ ಮುಖಾಂತರ ಖಾತೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಪಡಿತರ ಚೀಟಿ ಸೇವೆಗಳಿಗಾಗಿ ಬಯೋಮೆಟ್ರಿಕ್ ಅಥವಾ ಹೆಬ್ಬೆರಳು ಗುರುತನ್ನು ನೀಡಲು ಸಂಬಂಧಪಟ್ಟ ಕೇಂದ್ರಗಳಿಗೆ ಭೇಟಿ ನೀಡಿದಾಗ ಹೆಬ್ಬೆರಳು ಗುರುತು ಮ್ಯಾಚ್ ಆಗದಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆ ತುಂಬಾ ವಯಸ್ಸಾದ, ನಡೆಯಲು ಅಸಾಧ್ಯವಾದ ಪಡಿತರ ಚೀಟಿದಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇಂತಹ ಸಮಸ್ಯೆಗೆ ವಿನಾಯಿತಿ ನೀಡುವಂತೆ ಅಧ್ಯಕ್ಷರು ತಿಳಿಸಿದರು.
ಯುವನಿಧಿ ಯೋಜನೆಯಡಿಯಲ್ಲಿ ಲಭ್ಯವಿರುವ ಉದ್ಯೋಗ ತರಬೇತಿಯ ಬಗ್ಗೆ ಮಾಹಿತಿ ನೀಡಬೇಕು.ತಾಲೂಕು ಮಟ್ಟದಲ್ಲಿ ಯುವಕರಿಗೆ ಕೌಶಲ ತರಬೇತಿಗಳನ್ನು ನೀಡಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ. ಎಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜೋಕಿಂ ಡಿಸೋಜಾ, ನಾರಾಯಣ ನಾಯಕ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿಎ, ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ಸುಧೀರ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.













