ಸುಳ್ಯ: ಹಲವು ವರ್ಷಗಳಿಂದ ಕಾಮಗಾರಿ ಅಪೂರ್ಣವಾಗಿ ನೆನೆಗುದಿಗೆ ಬಿದ್ದಿರುವ ಸುಳ್ಯ ನಗರದ ಅಂಬೇಡ್ಕರ್ ಭವನದ ಕಾಮಗಾರಿ ಹಾಗೂ ಸ್ಥಳದ ಸ್ಥಿತಿಗತಿಗಳ ಕುರಿತು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪರಿಶೀಲನೆ ನಡೆಸಿದರು. ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ಅರ್ಧಕ್ಕೆ ನಿಂತ ಕಾಮಗಾರಿ ವೀಕ್ಷಿಸಿದರು.ತಾಲೂಕು ಮಟ್ಟದ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಿಳಂಬದ ಕುರಿತು ಮುಖಂಡರು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು.ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಭವನದ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದರು.
ಅಂಬೇಡ್ಕರ್ ಭವನ ನಿರ್ಮಾಣ ಪೂರ್ಣಗೊಳ್ಳದೆ ಹಲವು ವರ್ಷಗಳಿಂದ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಭವನದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಹಾಗೂ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯ
ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅರ್ಜಿತ್ ಪರಾಗ್ ಡೊಂಗ್ರೆ, ತಹಶೀಲ್ದಾರ್ ಮಂಜುಳಾ, ಎಸಿಎಫ್ ಪ್ರಶಾಂತ್ ಪೈ, ಪುತ್ತೂರು ಉಪವಿಭಾಗ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಬಿ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪಸ್ಥಿತರಿದ್ದರು.







