ಧರ್ಮಸ್ಥಳ: ಭಾರತ ಜನನನಿಯ ತನುಜಾತೆಯಾದ ಕರ್ನಾಟಕದಲ್ಲಿ ಶ್ರಮಸಂಸ್ಕೃತಿಯ ಲೋಪದಿಂದಾಗಿ ಕನ್ನಡ ಸೊರಗುತ್ತಿದೆ.ಯಾವುದೇ ಭಾಷೆಗೆ ವಿಚಾರಗಳನ್ನು ಭಾವನೆಗಳನ್ನು ಮತ್ತು ವ್ಯವಹಾರವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸುವ ಶಕ್ತಿ, ಸಾಮರ್ಥ್ಯ ಮತ್ತು ಪ್ರಭುತ್ವ ಇರಬೇಕು. ಈ ದಿಸೆಯಲ್ಲಿ ಪ್ರಾದೇಶಿಕ ವೈವಿಧ್ಯತೆಯ ಸೊಗಡು ಇದ್ದರೂ ಕನ್ನಡ ಸಮೃದ್ಧ ಭಾಷೆಯಾಗಿದೆ. ಪದಸಂಪತ್ತಿಗೆ ಕೊರತೆ ಇಲ್ಲ. ಯಾವುದೇ ಏರಿಳಿತ, ಅಡೆ-ತಡೆ ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ ಎಂದು
ಶತಾವಧಾನಿ ಆರ್. ಗಣೇಶ ಹೇಳಿದರು.ಅವರು ಶನಿವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ ೯೨ನೆ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.ಇಂದು ಕನ್ನಡದ ಬಗ್ಗೆ ಆಸಕ್ತಿಯಿಂದ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡುವವರಿಲ್ಲ. ವಿಮರ್ಶಕರಿಲ್ಲ. ದಾಕ್ಷಿಣ್ಯ ಮತ್ತು ಭಯದಿಂದ ಯಾವುದೇ ಹೊಸ ಪುಸ್ತಕ ಕಾದಂಬರಿ ಪ್ರಕಟವಾದರೂ ಯಾರೂ ವಿಮರ್ಶೆ ಮಾಡುವ ಗೋಜಿಗೆ ಹೋಗುವುದಿಲ್ಲ.
ಎಲ್ಲಾ ಕಲೆಗಳ ಜೀವಾಳ ರಸ. ಆನಂದದ ಮೂಲ ಕಲೆ ಮತ್ತು ಸಾಹಿತ್ಯದಲ್ಲಿದೆ. ಯುವಜನತೆ ಹೆಚ್ಚು ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಾಹಿತ್ಯ ಸಮಾಜದ ಪ್ರತಿಬಿಂಬ: ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ ಕನ್ನಡಿಗರ ಶ್ರೀಮಂತ ಸಂಸ್ಕೃತಿಯ ಸಂಕೇತವಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮದ ನಡುವೆ ಅವಿನಾಭಾವ ಸಂಬಂಧವಿದ್ದು ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಾಹಿತ್ಯವು ಸರ್ವರಿಗೆ ಹಿತವನ್ನುಂಟುಮಾಡುತ್ತದೆ. ಬುದ್ಧಿ-ಭಾವವನ್ನು ಪರಿಶುದ್ಧಗೊಳಿಸಿ ಬದುಕಿಗೆ ಉತ್ತಮ ಸಂಸ್ಕಾರ ನೀಡುತ್ತದೆ.
ಇಂದು ಅಂತರ್ಜಾಲದಲ್ಲಿ ಸಾಹಿತ್ಯ, ಕಲೆ, ಸಂಗೀತದ ಬಗ್ಯೆ ಚರ್ಚೆಗಳು ನಡೆಯುತ್ತಿವೆ. ತಂತ್ರಜ್ಞಾನದ ಬಳಕೆ ಹೊಸ ಮನ್ವಂತರವನ್ನೇ ಸೃಷ್ಟಿಸಿದೆ. ಸಾಹಿತ್ಯದ ಗುರಿ ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆ ಮೂಡಿಸುವುದೇ ಆಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಇತಿಹಾಸ ಕಾದಂಬರಿಗಳ ಬಗ್ಗೆಯೂ ಪ್ರಾಮಾಣಿಕ ಮೌಲ್ಯಮಾಪನ ಮತ್ತು ವಿಮರ್ಶೆ ಮಾಡಬೇಕು ಎಂದು ಎಂದು ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಂಶುಪಾಲ ಉಡುಪಿ ಪಾದೇಕಲ್ಲು ವಿಷ್ಣುಭಟ್ ಹೇಳಿದರು.
ಕನ್ನಡ ಬಲಿಷ್ಠವಾಗಿ ಬೆಳೆಯಲು ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತ್ರ, ಕಾವ್ಯ ಮೀಮಾಂಸೆ, ಭಾಷಾ ಶಾಸ್ತ್ರ ನಿಘಂಟು ಶಾಸ್ತ್ರ ಮತ್ತು ಹಸ್ತ ಪ್ರತಿ ಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಡಾ. ಪ್ರಮೀಳಾ ಮಾಧವ್ “ಸ್ತ್ರೀಯರ ಸ್ವಂತ ಸುಖಕ್ಕೆ ಸಾಹಿತ್ಯದ ಅರಿವಿನ ಅವಶ್ಯಕತೆ” ಬಗ್ಗೆ ಡಾ. ಬಿ.ವಿ. ವಸಂತ ಕುಮಾರ್ “ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಮಾರ್ಗೋಪಾಯಗಳು” ಎಂಬ ವಿಷಯದ ಬಗ್ಗೆ ಹಾಗೂ ಪ್ರೊ. ಮೊರಬದ ಮಲ್ಲಿಕಾರ್ಜುನ “ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯದ ಅವಶ್ಯಕತೆ ಮತ್ತು ಸಾಹಿತ್ಯವನ್ನು ಜನಪ್ರಿಯಗೊಳಿಸುವ ಮಾರ್ಗೋಪಾಯಗಳು” ವಿಷಯದ ಬಗ್ಯೆ ಉಪನ್ಯಾಸ ನೀಡಿದರು.
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಶೋಕ್ಕುಮಾರ್ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.