ಲಖನೌ: ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 8 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ.
ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 160 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 17.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ. ಈ ಮೂಲಕ ತವರು ನೆಲದಲ್ಲಿಯೇ ಲಖನೌ ತಂಡ ಸೋಲೊಪ್ಪಿಕೊಂಡಿದೆ. ಡೆಲ್ಲಿ ಪರ ಕೆ.ಎಲ್.ರಾಹುಲ್ ಮತ್ತು
ಅಭಿಷೇಕ್ ಪೋರೆಲ್ ಅರ್ಧ ಶತಕ ಸಿಡಿಸಿದರು. ಕೆ.ಎಲ್.ರಾಹುಲ್ 42 ಎಸೆತಗಳಲ್ಲಿ ತಲಾ 3 ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ ಅಜೇಯ 57 ರನ್ ಗಳಿಸಿದರು. ಪೋರೆಲ್ 36 ಎಸೆತಗಳಲ್ಲಿ5 ಬೌಂಡರಿ 1ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ನಾಯಕ ಅಕ್ಸರ್ ಪಟೇಲ್ 20 ಎಸೆತಗಳಲ್ಲಿ4 ಸಿಕ್ಸರ್ 1 ಬೌಂಡರಿ ನೆರವಿನಿಂದ ಅಜೇಯ 34 ರನ್ ಬಾರಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಲಖನೌ ತಂಡಕ್ಕೆ ಓಪನರ್ಗಳಾದ ಏಡೆನ್ ಮಾರ್ಕರಂ ಹಾಗೂ ಮಿಚೆಲ್ ಮಾರ್ಷ್ ಬಿರುಸಿನ ಆರಂಭವೊದಗಿಸಿದರು.
ಇವರಿಬ್ಬರು ಮೊದಲ ವಿಕೆಟ್ಗೆ 10 ಓವರ್ಗಳಲ್ಲಿ 87 ರನ್ಗಳ ಜೊತೆಯಾಟ ಕಟ್ಟಿದರು. ಮಾರ್ಷ್ 45 ರನ್ ಗಳಿಸಿ ಔಟ್ ಆದರು.ಮತ್ತೊಂದೆಡೆ ಆಕರ್ಷಕ ಇನಿಂಗ್ಸ್ ಕಟ್ಟಿದ ಮಾರ್ಕರಂ ಅರ್ಧಶತಕದ ಸಾಧನೆ ಮಾಡಿದರು. ಮಾರ್ಕರಂ 33 ಎಸೆತಗಳಲ್ಲಿ 52 ರನ್ (3 ಸಿಕ್ಸರ್, 2 ಬೌಂಡರಿ) ಗಳಿಸಿದರು.
ಈ ನಡುವೆ ನಿಕೋಲಸ್ ಪೂರನ್ (9), ಅಬ್ದುಲ್ ಸಮದ್ (2) ವೈಫಲ್ಯ ಅನುಭವಿಸಿದರು.ಕೊನೆಯ ಹಂತದಲ್ಲಿ ಆಯುಷ್ ಬಡೋನಿ 36 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ನಾಯಕ ರಿಷಭ್ ಪಂತ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಇನ್ನುಳಿದಂತೆ ಡೇವಿಡ್ ಮಿಲ್ಲರ್ 14 ರನ್ ಗಳಿಸಿ ಔಟಾಗದೆ ಉಳಿದರು.ಡೆಲ್ಲಿ ಪರ ಮುಕೇಶ್ ಕುಮಾರ್ 33 ರನ್ನಿಗೆ ನಾಲ್ಕು ವಿಕೆಟ್ ಕಬಳಿಸಿದರು.
ಎಂಟು ಪಂದ್ಯಗಳಲ್ಲಿ 6 ಗೆದ್ದಿರುವ ಡೆಲ್ಲಿ 12 ಅಂಕ ಗಳಿಸಿದೆ.
ಮತ್ತೊಂದೆಡೆ ಲಖನೌ 9 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ 10 ಅಂಕ ಸಂಪಾದಿಸಿದೆ.