ಮಂಗಳೂರು: ಮುಂದಿನ ವರ್ಷದಲ್ಲಿ ದೇಶ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದು ಕೇಂದ್ರ ರಾಸಾಯನಿಕ, ರಸ ಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬ ಅವರು ತಿಳಿಸಿದರು. ಅವರು ಆ.25ರ ಶುಕ್ರವಾರ ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ದೇಶದಲ್ಲಿ ಈಗಾಗಲೇ ಐದು ಯೂರಿಯಾ ಉತ್ಪಾದನಾ
ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ವರ್ಷ 6ನೇ ಘಟಕ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ ಪ್ರತಿ ವರ್ಷ 12.7 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡುವ ಮೂಲಕ ದೇಶದ ಅಗತ್ಯದ ಯೂರಿಯಾ ಉತ್ಪಾದನೆ ಯ ಗುರಿ ಸಾಧನೆಯೊಂದಿಗೆ ಸ್ವಾವಲಂಬನೆ ಸಾಧ್ಯ ವಾಗಲಿದೆ. ಮುಂದಿನ ವರ್ಷ ಬೇಡಿಕೆ ಇರುವ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ರೈತರಿಗೆ ಒದಗಿಸಲಾಗುವುದು ಎಂದು ಭಗವಂತ ಖೂಬ ತಿಳಿಸಿದರು.
ಜನವರಿಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಉದ್ಘಾಟನೆ:
ಮಂಗಳೂರು ನಗರ ಹೊರವಲಯದ ಗಂಜಿ ಮಠದಲ್ಲಿ 104 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಪ್ಲಾಸ್ಟಿಕ್ ಪಾಕ್೯ ಮುಂದಿನ ಜನವರಿಯಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಸಚಿವರು104 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ವಿವಿಧ ಘಟಕಗಳು ನಿರ್ಮಾಣವಾಗಲಿದೆ. ಸಿಪೆಟ್ ಕಾಲೇಜು ಕೂಡಾ ಈ ಪ್ರದೇಶದಲ್ಲಿ ಬರಲಿದೆ, ಡಿಸೆಂಬರ್ ನೊಳಗೆ ಈ ಪ್ರದೇಶ ದಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಕಾಲೇಜು ಕಟ್ಟಡ ನಿರ್ಮಾಣವಾಗಲಿದೆ. ಇದೂವರೆಗೆ ಶೇ.70ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ ಕೇವಲ 15% ಮಾತ್ರ ಕಾಮಗಾರಿ ಆಗಿರುವುದು ಕಂಡುಬಂದಿದೆ. ಅಗತ್ಯ ಇಂಜಿನಿಯರ್ ಗಳನ್ನು ನಿಯೋಜಿಸಬೇಕು, ಗುತ್ತಿಗೆದಾರರು ಮಾನವಶಕ್ತಿ ಹಾಗೂ ಯಂತ್ರ ಶಕ್ತಿಯನ್ನು ಹೆಚ್ಚು ಮಾಡಿದ್ದಲ್ಲೀ ಕಾಮಗಾರಿಯಲ್ಲಿ ಸಾಕಷ್ಟು ಪ್ರಗತಿ ಕಾಣಬಹುದಾಗಿದೆ, ಮುಂಬರುವ ದಿನಗಳಲ್ಲಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯಬೇಕು ಎಂದು ಇಂಜಿನಿಯರ್ ಅವರಿಗೆ ಸಚಿವರು ಸೂಚಿಸಿದರು. ಡಿಸೆಂಬರ್ ನೊಳಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕು, ಜನವರಿಯಲ್ಲಿ ಪ್ಲಾಸ್ಟಿಕ್ ಪಾಕ್೯ ಉದ್ಘಾಟನೆಯಾಗಬೇಕು. ಪ್ರತಿ ತಿಂಗಳು ಈ ಯೋಜನೆಯ ಮಾಹಿತಿಯನ್ನು ಖುದ್ದಾಗಿ ಪಡೆಯುತ್ತೇನೆ. ಭೂಸ್ವಾದೀನಕ್ಕೆ ಆಗಿರುವ ತೊಡಕುಗಳನ್ನು ಶೀಘ್ರ ನಿವಾರಿಸಿಕೊಳ್ಳಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಕೆಐಎಡಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ್, ಕೆನರಾ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ನಜೀರ್, ಐಎಎಸ್ ಪ್ರೊಬೇಷನರಿ ಮುಕುಲ್ ಜೈನ್, ಕೆಐಎಡಿಬಿ ಮುಖ್ಯ ಎಂಜಿನಿಯರ್ ವೀರಭಧ್ರಯ್ಯ ಸೇರಿದಂತೆ ಕಂದಾಯ, ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.