ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಉಂಟಾದ ಸೋಲಿನ ಕುರಿತು ಕಾಂಗ್ರೆಸ್ ಪಕ್ಷದ ವತಿಯಿಂದ ಪರಾಮರ್ಶೆ ನಡೆಸಲಾಗುವುದು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಒಳ್ಳೆಯ ಅಭ್ಯರ್ಥಿಯಾಗಿದ್ದರು. ಅವರನ್ನು ಗೆಲ್ಲಿಸಲು ಹೋರಾಟ ನಡೆಸಿದ್ದೇವೆ. ಗೆಲ್ಲಲು ಆಗದಿದ್ದರೂ
ಉತ್ತಮ ಹೋರಾಟ ಮಾಡಲು ಸಾಧ್ಯವಾಗಿದೆ. ಜನರ ತೀರ್ಪನ್ನು ಒಪ್ಪುತ್ತೇವೆ.ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಫಲ ಸಿಗಲಿಲ್ಲ. ಪ್ರತಿ ಗ್ರಾಮದಲ್ಲಿ ಸೋಲಿನ ಪರಾಮರ್ಶೆ ಮಾಡುತ್ತೇವೆ. ಪ್ರತಿ ಬೂತ್ನಲ್ಲಿ 50 ಮತ ಹೆಚ್ಚುವರಿ ಬರುವ ನಿರೀಕ್ಷೆ ಇತ್ತು. ಆದರೆ ಹಾಗೆ ಆಗಲಿಲ್ಲ. ಜನರು ಭಾವನಾತ್ಮಕ ವಿಷಯಗಳಿಗೆ ಮತ ನೀಡಿದ್ದಾರೆ ಎಂದು ಹೇಳಿದ್ದಾರೆ.ದೇಶದಲ್ಲಿ ಇಂಡಿಯಾ ಒಕ್ಕೂಟ ಉತ್ತಮ ಸಾಧನೆ ಮಾಡಿದೆ. ರಾಹುಲ್ ಗಾಂಧಿ ಅವರು ಮಾಡಿದ ಭಾರತ್ ಜೋಡೊ ಯಾತ್ರೆ, ನ್ಯಾಯ ಯಾತ್ರೆಗೆ ನ್ಯಾಯ ಸಿಕ್ಕಿದೆ. ದೇಶದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ. ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಸಾಕಷ್ಟು ಪ್ರಯತ್ನ ಮಾಡಿದೆ. ಪ್ರತಿ ಮನೆ ಮನೆ ಮುಟ್ಟಿದ್ದೇವೆ ಎಂದು ಅವರು ಹೇಳಿದರು.
ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ ‘ಈ ಬಾರಿಯ ಚುನಾವಣೆಯಲ್ಲಿಪ್ರಜಾತಂತ್ರ ಗೆದ್ದಿದೆ. ಎಲ್ಲರಿಗೂ ಸಮಾನಾದ ಸ್ಥಾನ ಸಿಕ್ಕಿದೆ. ಸಂವಿಧಾನಕ್ಕೆ ಗೌರವ ಸಿಕ್ಕಿದೆ.ಪ್ರಜಾತಂತ್ರಕ್ಕೆ ದೊಡ್ಡ ಗೌರವ ಸಿಕ್ಕಿದೆ.ರಾಹುಲ್ ಗಾಂಧಿ ಈ ಬಾರಿ ವಿರೋಧ ಪಕ್ಷದ ನಾಯಕನಾಗುತ್ತಾರೆ, ಮುಂದಿನ ಬಾರಿ ಪ್ರಧಾನ ಮಂತ್ರಿ ಆಗುತ್ತಾರೆ ಎಂದು ಹೇಳಿದರು. ರಾಮನ ಆಶೀರ್ವಾದ ಈ ಭಾರಿ ಇಂಡಿಯಾಕ್ಕೆ ಸಿಕ್ಕಿದೆ. ಅಯೋಧ್ಯೆಯಲ್ಲಿ ಇಂಡಿಯಾ ಒಕ್ಕೂಟ ಗೆದ್ದಿದೆ ಎಂದು ಹೇಳಿದರು. ಚುನಾವಣಾ ಫಲಿತಾಂಶ ಜಾತ್ಯಾತೀತ ಶಕ್ತಿಗಳಿಗೆ ಆಶಾದಾಯಕವಾಗಿದೆ. ಮುಂದೆ ಪಕ್ಷದ ವತಿಯಿಂದ ಸೋಲಿನ ಪರಾಮರ್ಶೆ ನಡೆಸಲಾಗುವುದು ಎಲ್ಲೆಲ್ಲ ತಿದ್ದಿಕೊಳ್ಳಬೇಕು ಅಲ್ಲೆಲ್ಲ ತಿದ್ದಿಕೊಳ್ಳುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ನಂದರಾಜ ಸಂಕೇಶ, ಮುತ್ತಪ್ಪ ಪೂಜಾರಿ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.