ಸುಳ್ಯ:ಮಳೆ ಮಾಪನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕಳೆದ ವರ್ಷ ರೈತರಿಗೆ ಬೆಳೆ ವಿಮೆ ಸರಿಯಾಗಿ ಪಾವತಿಯಾಗಿಲ್ಲ ಆದುದರಿಂದ ಮಳೆಮಾಪನಗಳನ್ನು ಈ ಬಾರಿ ಸುಸ್ತಿತಿಯಲ್ಲಿಡಲು ಕ್ರಮ ಕೈಗೊಳ್ಳಬೇಕು.ಮಳೆ ಮಾಪನಗಳು ಸರಿಯಾಗಿ ಕಾರ್ಯನಿರ್ವಹಿಸದೆ ರೈತರಿಗೆ ಅನ್ಯಾಯ ಆದರೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗು ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಕೃಷಿ ನಾಶ ಆಗಿ ರೈತರಿಗೆ ಆಗುವ ನಷ್ಟವನ್ನು ಭರಿಸುವ ದೃಷ್ಠಿಯಿಂದ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಜಾರಿಗೆ ತಂದಿದೆ.ಕಳೆದ ವರ್ಷದ ತನಕ ಬೆಳೆ ವಿಮೆ ಸರಿಯಾಗಿ ಪಾವತಿಯಾಗುತ್ತಿತ್ತು.ಆದರೆ ಕಳೆದ ಬಾರಿ ಮಳೆ ಮಾಪನಗಳು ಸರಿಯಾಗಿ ಡಾಟಾ ನೀಡದ ಕಾರಣ
ಆಗಿ ಕೃಷಿಕರಿಗೆ ಸರಿಯಾಗಿ ವಿಮಾ ಪರಿಹಾರ ಪಾವತಿಯಾಗಿರಲಿಲ್ಲ.
ತಾಲೂಕು ಹಾಗೂ ಜಿಲ್ಲೆಯಾದ್ಯಂತ ಮಳೆಮಾಪಕಗಳು ಸರಿಯಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಮಾಹಿತಿಯಿದ್ದು ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಮಳೆಮಾಪಕಗಳು ಕೆಟ್ಟು ಹೋಗಿರುವುದು ಮತ್ತು ವಿಮಾ ಕಂಪೆನಿಗಳ ಜೊತೆಗೆ ಸಂವಹನದ ಕೊರತೆಯಿಂದ 2024-25ರ ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ

ಅನ್ಯಾಯ ಆಗಿದೆ.2025-26 ರ ವಿಮಾಕಂತು ಕೂಡಾ ಪಾವತಿಯಾಗಿದ್ದು ಮಳೆಮಾಪಕಗಳು ಇನ್ನೂ ಕೂಡಾ ರಿಪೇರಿ ಆಗದಿರುವುದರಿಂದ ಈ ಸಾರಿ ಕೂಡ ವಿಮಾ ಪಾವತಿಯಲ್ಲೂ ರೈತರಿಗೆ ಅನ್ಯಾಯವಾಗುವ ಆತಂಕ ಇದೆ.ಕಳೆದ ವರ್ಷವೇ ಸಮಸ್ಯೆ ಅರಿವಾಗಿದ್ದರೂ ಈ ತನಕವೂ ಮಳೆಮಾಪಕಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು
ಖಂಡನೀಯ. ಸುಳ್ಯ ತಾಲೂಕಿನ 24 ಮಳೆಮಾಪಕಗಳಲ್ಲಿ 16 ಕೆಟ್ಟು ಹೋಗಿದೆ. 1 ಗ್ರಾಪಂನಲ್ಲಿ ಇನ್ನೂ ಅಳವಡಿಕೆ ಆಗಿಲ್ಲ. ಜಿಲ್ಲೆಯ 274 ಕಡೆ ಮಳೆಮಾಪಕ ಇರಬೇಕಾಗಿದ್ದು, ಹಲವು ಕಡೆಗಳಲ್ಲಿ ದುಸ್ಥಿತಿಯಲ್ಲಿದೆ. ಮಳೆ ಮಾಪಕಗಳ ಮೇಲ್ವಿಚಾರಣೆಯನ್ನು ರಾಜ್ಯ ಸರಕಾರ ಸರಿಯಾಗಿ ಮಾಡದ ಕಾರಣ ಈ ರೀತಿ ಸಮಸ್ಯೆ ಆಗಲು ಕಾರಣವಾಗಿದೆ. ಸರಕಾರದ ರೈತರ ಕಡೆಗಿನ ನಿರ್ಲಕ್ಷ್ಯಕ್ಕೆ ಇದು ಪ್ರತ್ಯಕ್ಷ ಸಾಕ್ಷಿ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ.ಟಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಬೆಳ್ಳಾರೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು,
ಪ್ರಮು ಶಿವಾನಂದ ಕುಕ್ಕುಂಬಳ, ಚನಿಯ ಕಲ್ತಡ್ಕ, ಅಶೋಕ್ ಅಡ್ಕಾರ್, ಹರ್ಷಿತ್ ಕಾರ್ಜ ಉಪಸ್ಥಿತರಿದ್ದರು.








