ಸುಳ್ಯ:ಬರೋಬರಿ 19 ಗಂಟೆಯ ಬಳಿಕ ಸುಳ್ಯಕ್ಕೆ ವಿದ್ಯುತ್ ಸಂಪರ್ಕ ಪುನಃ ಸ್ಥಾಪಿಸಲಾಗಿದೆ. ಆನೆಗುಂಡಿ ಸಮೀಪ ಪಂಜಿಗುಂಡಿ ಎಂಬಲ್ಲಿ ಬೃಹತ್ ಗಾತ್ರದ ಮರ ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆ.ವಿ.ಲೈನ್ ಮೇಲೆ ಬಿದ್ದು ಕಂಬ ಹಾಗೂ ಲೈನ್ಗೆ ಹಾನಿಯಾಗಿ ವಿದ್ಯುತ್ ಕಡಿತಗೊಂಡಿತ್ತು. ಬುಧವಾರ ರಾತ್ರಿ 9 ಗಂಟೆಗೆ ಕಡಿತಗೊಂಡ
ವಿದ್ಯುತ್ ಗುರುವಾರ ಸಂಜೆ 4 ಗಂಟೆಯ ವೇಳೆಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಮಧ್ಯೆ ಸುಳ್ಯಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿದ್ದ 33 ಕೆ.ವಿ. ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡುವಂತೆ ಆಗ್ರಹಿಸಿ ಸುಳ್ಯ ಮಂಡಲ ಬಿಜೆಪಿ ನಿಯೋಗ ಮೆಸ್ಕಾಂಗೆ ಮನವಿ ಸಲ್ಲಿಸಿದೆ. ಮಾಡಾವು ವಿದ್ಯುತ್ ಸ್ಥಾವರದಿಂದ ಸುಳ್ಯ ಉಪವಿಭಾಗಕ್ಕೆ ಬರುವ 33ಕೆ.ವಿ.ಯ ಹೊಸ ವಿದ್ಯುತ್ ಮಾರ್ಗದಲ್ಲಿ ಪ್ರಸ್ತುತ ವಿದ್ಯುತ್ ಸರಬರಾಜು ಆಗುತ್ತಿದೆ. ಸದ್ರಿ ವಿದ್ಯುತ್ ಮಾರ್ಗವು ಅರಣ್ಯ ಪ್ರದೇಶದಲ್ಲಿ ಹಾದು ಬರುವುದರಿಂದ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
ಈ ಹಿಂದೆ ಹೊಸ ವಿದ್ಯುತ್ ಮಾರ್ಗ ಎಳೆಯುವ ಸಂದರ್ಭದಲ್ಲಿ ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದರೂ, ಹಳೆಯ ವಿದ್ಯುತ್ ಮಾರ್ಗವನ್ನು ಯಾವುದೇ ನಿರ್ವಹಣೆ ಮಾಡದೇ ಇದ್ದು, ಸದ್ರಿ ವಿದ್ಯುತ್ ಮಾರ್ಗವನ್ನು ಬದಲೀ ಮಾರ್ಗವಾಗಿ ಬಳಕೆಯಲ್ಲಿ ಇಟ್ಟಿರುವುದಿಲ್ಲ. ಸುಳ್ಯಕ್ಕೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸದ್ರಿ ಎರಡೂ ಮಾರ್ಗಗಳನ್ನು ಬಳಕೆಯಲ್ಲಿ ಇಡುವುದು ಅತ್ಯವಶ್ಯವಾಗಿರುವುದರಿಂದ ಈ ಕೂಡಲೇ ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಲ್ಲದೇ ಸುಳ್ಯದಲ್ಲಿ ಈಗಾಗಲೇ ಅನಿಯಮಿತ ಲೋಡ್ ಶೆಡ್ಡಿಂಗ್ ಕಾರಣದಿಂದ, ಕೃಷಿ ಹಾಗೂ ಕುಡಿಯುವ ನೀರಿನ ಸರಬರಾಜಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ನಿಯಮಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಹೇಮಂತ್ ಕಂದಡ್ಕ, ಚಂದ್ರಶೇಖರ ಕೇರ್ಪಳ ಇದ್ದರು. ಮೆಸ್ಕಾಂ ಇಂಜಿನಿಯರ್ ಸುಪ್ರಿತ್ ಮನವಿ ಸ್ವೀಕರಿಸಿದರು.