ಕೂಡ್ಲಿಗಿ:ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ನೇತೃತ್ವದಲ್ಲಿ ಒಂದು ಲಕ್ಷ ಗಿಡಗಳ ಭಾರತವನ ನಿರ್ಮಾಣ ಆಗಲಿದೆ. ಕರ್ನಾಟಕದಲ್ಲಿ ಅವರು ನಿರ್ಮಾಣ ಮಾಡುತ್ತಿರುವ ಅತೀ ದೊಡ್ಡ ಅರಣ್ಯ ಯೋಜನೆ ಇದಾಗಿದೆ. ಕರ್ನಾಟಕದಲ್ಲಿ ಈ ಹಿಂದೆ ಕೆಲವು ಕಡೆ ಅರಣ್ಯೀಕರಣ ನಡೆಸಿದ್ದರೂ ರಾಜ್ಯದಲ್ಲಿ
ಇಷ್ಟು ದೊಡ್ಡ ಯೋಜನೆ ಇದು ಪ್ರಥಮ. ಕೃಷಿಕರಿಗಾಗಿ ಹಣ್ಣು ಹಂಪಲಿನ ಗಿಡಗಳನ್ನು ಒಳಗೊಂಡ ವನ ನಿರ್ಮಾಣ ಮಾಡಲಾಗುತ್ತದೆ.ಗಿಡ ನೆಡಲು ಅಗತ್ಯ ಸಿದ್ಧತೆಗಳನ್ನು ಡಾ.ಆರ್.ಕೆ.ನಾಯರ್ ನೇತೃತ್ವದಲ್ಲಿ ಆರಂಭಗೊಂಡಿದೆ. ‘ಮಿಯಾವಾಕಿ’ ಮಾದರಿಯಲ್ಲಿ ನಾಯರ್ ನಿರ್ಮಾಣ ಮಾಡುವ ಭಾರತ ವನ ನಿರ್ಮಾಣ ಕಾರ್ಯಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿವೆ. ತಾಲೂಕಿನಾದ್ಯಂತ ಇರುವ ಬಂಜರು, ಅನುತ್ಪಾದಕ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಭೂಮಿ, ಸರಕಾರಿ ಹಾಗೂ ಆಸಕ್ತ ರೈತರ ಜಮೀನುಗಳಲ್ಲಿ ಹುಣಸೆ, ಬೇಲ, ನೆಲ್ಲಿ, ನೇರಳೆ, ಕವಳೆ, ಚೆರ್ರಿ ನಿಂಬೆ ಹಾಗೂ ಹಸಿರೆಲೆ ಗೊಬ್ಬರದ ಮರಗಳಾಗಿ ಬೆಳೆಸಲು ಬೇವು, ಹೊಂಗೆ, ಗ್ಲಿರಿಸಿಡಿಯಾ ಸೇರಿ ನಾನಾ ವಿಧದ 1 ಲಕ್ಷ ಸಸಿ ನೆಡುವ ಗುರಿ

ಹೊಂದಲಾಗಿದೆ. ಅದರ ಮೊದಲ ಭಾಗವಾಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 10 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಭೂಮಿಯಲ್ಲಿ ಸಸಿ ನೆಡುವುದಕ್ಕಾಗಿ ಜಾಗದ ಸ್ವಚ್ಛತೆ ಹಾಗೂ ಗುಂಡಿ ತೋಡುವ ಕಾರ್ಯ ಕೆಲವು ದಿನದಿಂದ ಭರದಿಂದ ನಡೆದಿದೆ.ಜೂ.5ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಳ್ಳಾರಿ ಸಂಸದ ಇ.ತುಕಾರಾಮ್ ಹಾಗೂ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭಾಗವಹಿಸಲಿದ್ದು ನೂತನ
ಯೋಜನೆಗೆ ಚಾಲನೆ ನೀಡಲಿದ್ದಾರೆ. ವರ್ಷಕ್ಕೆ 50 ಸಾವಿರದಂತೆ 2 ವರ್ಷಗಳಲ್ಲಿ ಒಟ್ಟು 1 ಲಕ್ಷ ಸಸಿ ನಡೆಲಾಗುತ್ತಿದೆ. ಈ ಯೋಜನೆಯನ್ನು ದೇಶದ ನಾನಾ ಕಂಪನಿಗಳಿಂದ ಲಭ್ಯವಾಗುವ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹಣದಲ್ಲಿ ಎನ್ವಿರೋ ಫಾರೆಸ್ಟ್ ಕ್ರಿಯೇಟರ್ ಸಂಸ್ಥೆಯು ಗ್ರೀನ್ ಗ್ರೋವರ್ಸ್ ಹಾರ್ಟಿಕಲ್ಚರ್ ಸೊಸೈಟಿ ಸಹಕಾರದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಈ ವರ್ಷದಿಂದ ಆರಂಭಗೊಳ್ಳುತ್ತಿದೆ.
ಇಲ್ಲಿನ ಹವಾಗುಣಕ್ಕೆ ಅನುಗುಣವಾಗುವ ವಿವಿಧ ಹಣ್ಣುಗಳ ಸಸಿಗಳು ಸೇರಿ 1 ಲಕ್ಷ ಸಸಿಗಳನ್ನು 2 ವರ್ಷದಲ್ಲಿ ನೆಡುವ ಯೋಜನೆ ಇದೆ ಎಂದು.ಡಾ.ಆರ್.ಕೆ.ನಾಯರ್ ತಿಳಿಸಿದ್ದಾರೆ. ರಾಯಚೂರಿನಲ್ಲಿ 60 ಸಾವಿರ ಗಿಡಗಳ ಭಾರತ ವನ ನಿರ್ಮಾಣ ಮಾಡಲಾಗುತಿದೆ ಎಂದು ಅವರು ತಿಳಿಸಿದ್ದಾರೆ.















