ಹಾಂಗ್ಚೋ: ಚೀನಾದ ಹ್ಯಾಂಗ್ಚೋನಲ್ಲಿ ಆಯೋಜಿಸಿರುವ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಯಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್ಗೆ ಪ್ರವೇಶಿಸಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಮೃತಿ ಮಂದಾನ ನಾಯಕತ್ವದ ಭಾರತ ಮಹಿಳಾ ತಂಡ 8 ವಿಕೆಟ್ಗಳ ಜಯ ಸಾಧಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಪದಕವನ್ನು ಖಚಿತ ಪಡಿಸಿದೆ. ಫೈನಲ್ನಲ್ಲಿ
ಭಾರತ ತಂಡ ಪಾಕಿಸ್ತಾನ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ 17.5 ಓವರ್ಗಳಲ್ಲಿ 51 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಪೂಜಾ 4 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಟಿಟಾಸ್ ಸಾಧು , ದೇವಿಕಾ ವೈದ್ಯ , ಅಮಂಜೋತ್ ಕೌರ್ , ರಾಜೇಶ್ವರಿ ಗಾಯಕ್ವಾಡ್ ತಲಾ 1 ವಿಕೆಟ್ ಪಡೆದರು.
52 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ನಾಯಕಿ ಸ್ಮೃತಿ ಮಂಧಾನ (7) ಹಾಗೂ ಶಫಾಲಿ ವರ್ಮಾ (17) ವಿಕೆಟ್ ಕಳೆದುಕೊಂಡಿತಾದರೂ ಯಾವುದೇ ತೊಂದರೆ ಆಗಲಿಲ್ಲ. ಜೆಮಿಮಾ ರೋಡ್ರಿಗಸ್ (20) ಹಾಗೂ ಕನಿಕಾ ಅಹುಜಾ (1) 8.2 ಓವರ್ಗಳಲ್ಲೇ ಪಂದ್ಯವನ್ನು ಮುಗಿಸಿದರು. ಎರಡನೇ ಸೆಮಿ ಫೈನಲ್ನಲ್ಲಿ ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿ ಆಗಲಿದ್ದು, ಇಲ್ಲಿ ಗೆದ್ದ ತಂಡದ ಜೊತೆ ಭಾರತ ಫೈನಲ್ನಲ್ಲಿ ಚಿನ್ನಕ್ಕೆ ಹೋರಾಡಲಿದೆ.