ನವದೆಹಲಿ: ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸು ಹಾಗೂ ನಂತರದ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯಲ್ಲಿ ವಿವರ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22 ನಡೆದ ಉಗ್ರರ ದಾಳಿ ಬಳಕ ನಡೆದ ಎರಡನೇ ಸರ್ವಪಕ್ಷ ಸಭೆ ಇದಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಂಸತ್ ಭವನದಲ್ಲಿ ನಡೆದ
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರದ ಪರವಾಗಿ ಭಾಗವಹಿಸಿದ್ದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ನಿಂದ ಭಾಗವಹಿಸಿದ್ದಾರೆ.
ಇತರ ವಿರೋಧ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ನ ಸಂದೀಪ್ ಬಂಡೋಪಾಧ್ಯಾಯ, ಡಿಎಂಕೆಯ ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಎಎಪಿಯ ಸಂಜಯ್ ಸಿಂಗ್, ಶಿವ ಸೇನಾದ (ಯುಬಿಟಿ) ಸಂಜಯ್ ರಾವುತ್, ಎನ್ಸಿಪಿಯ (ಶರದ್ ಪವಾರ್) ಸುಪ್ರಿಯಾ ಸುಳೆ ಅವರೂ ಪಾಲ್ಗೊಂಡಿದ್ದಾರೆ.
ಜೆಡಿ(ಯು) ನಾಯಕ ಸಂಜಯ್ ಝಾ, ಎಲ್ಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರೂ ಸಭೆಯಲ್ಲಿದ್ದರು
‘ಆಪರೇಷನ್ ಸಿಂಧೂರ’ದ ಕುರಿತು ಎಲ್ಲ ಪಕ್ಷಗಳಿಗೆ ಮಾಹಿತಿ ನೀಡಲು ಸರ್ಕಾರ ಬಯಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಗುರಿಯಾಗಿಸಿ ಭಾರತ ನಡೆಸಿರುವ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಕನಿಷ್ಠ 100 ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾಹಿತಿ ನೀಡಿದ್ದಾರೆ.
ಆಪರೇಷನ್ ಸಿಂಧೂರ ಸಂಬಂಧ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಈ ಕುರಿತು ರಕ್ಷಣಾ ಸಚಿವರು ವಿವರಣೆ ನೀಡಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಸಶಸ್ತ್ರ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಒಂಬತ್ತು ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು.
ಸದ್ಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಜಾರಿಯಲ್ಲಿದ್ದು, ಒಂದು ವೇಳೆ ಪಾಕಿಸ್ತಾನ ದಾಳಿ ನಡೆಸಿದರೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ರಾಜನಾಥ ತಿಳಿಸಿದ್ದಾರೆ.
‘ಆಪರೇಷನ್ ಸಿಂಧೂರ ಜಾರಿಯಲ್ಲಿರುವುದರಿಂದ ಸಶಸ್ತ್ರ ಪಡೆಗಳ ಈ ಕಾರ್ಯಾಚರಣೆಗೆ ಸಂಬಂಧಿಸಿದ ತಾಂತ್ರಿಕ ವಿವರಗಳನ್ನು ಈಗ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸಶಸ್ತ್ರ ಪಡೆಯ ಯಾವುದೇ ಅಧಿಕಾರಿಯೂ ಸಭೆಯಲ್ಲಿ ಭಾಗವಹಿಸಿಲ್ಲ. ಅವರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಒಮ್ಮತ ಮೂಡಿಬಂದಿದೆ. ಗಡಿಯಲ್ಲಿ ಭಾರತೀಯರ ಭದ್ರತೆ ಹಾಗೂ ರಾಷ್ಟ್ರೀಯ ಭದ್ರತೆ ಬಗ್ಗೆ ವಿಪಕ್ಷದವರು ಕಳವಳ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರ ಹಾಗೂ ಸಶಸ್ತ್ರ ಪಡೆಗಳ ಜತೆ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.