ಸುಳ್ಯ:ನಗರಗಳಲ್ಲಿ ಎಲ್ಲಾ ನಿವೇಶನಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎಂದು ವರ್ಗಿಕರಿಸಿ ಸರಕಾರವು ಅಧಿಸೂಚನೆ ಹೊರಡಿಸಿ ತುರಾತುರಿಯಲ್ಲಿ ಬಿ ಖಾತಾ ನೀಡಲು ಆಂದೋಲನಕ್ಕೆ ಆದೇಶ ನೀಡಿರುವುದು ಜನಗಳ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಇದರ ಸರಕಾರದ ಖಜಾನೆ ತುಂಬಲು ಇನ್ನೊಂದು ಮಾರ್ಗವಷ್ಟೇ ಆಗಿದೆ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ವಿನಯ್ ಕುಮಾರ್ ಕಂದಡ್ಕ ಟೀಕಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಜನಗಳಿಗೆ
ಖಾತಾ ನೀಡುವ ಸಮಸ್ಯೆ ರಾಜ್ಯದಲ್ಲಿದ್ದು ಇದಕ್ಕೆ ಸೂಕ್ತ ನಿಯಮಗಳನ್ನು ರೂಪಿಸದೆ, ಈ ಕುರಿತ ಅಕ್ರಮ- ಸಕ್ರಮ ಕಾನೂನಿನ ಕುರಿತ ವ್ಯಾಜ್ಯಗಳು ಸುಪ್ರೀಂ ಕೋರ್ಟ್ ನಲ್ಲಿ ಇರುವಾಗ ನ್ಯಾಯಾಲಯದಲ್ಲಿ ಸರಿಯಾದ ವಾದಗಳನ್ನು ಮಂಡಿಸಿ ಜನಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ಬದಲಾಗಿ ಕೇವಲ ಬಿ ಖಾತ ನೀಡುವ ನೀತಿ ಸರಿಯಲ್ಲ. ಅನಧಿಕೃತ ನಿವೇಶನಗಳಿಗೆ ಬಿ ಖಾತ ನೀಡುವ ಪದ್ಧತಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಹಿಂದಿನಿಂದಲೂ ಇದೆ. ಇದು ಕೇವಲ ಆಸ್ತಿ ಮಾರಾಟಕ್ಕೆ ಮಾತ್ರ ಅನುಕೂಲವೇ ಹೊರತು ಇದು ಶಾಶ್ವತ ಪರಿಹಾರ ಅಲ್ಲ ಇಂಥ ನಿವೇಶನಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅನುಮತಿಯು ಇರುವುದಿಲ್ಲ.
ವಿನ್ಯಾಸ ಅನುಮೋದನೆಗೊಳ್ಳದ ನಿವೇಶನಗಳಿಗೆ ಸಹಜವಾಗಿ ಬ್ಯಾಂಕ್ ಸಾಲಗಳು ಕೂಡ ಲಭ್ಯವಾಗುವುದಿಲ್ಲ. ಹಾಗಾಗಿ ಸರಕಾರವೇ ಈ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಿದಂತೆ ಸದ್ರಿ ಬಿ ಖಾತ ನಿವೇಶನಗಳು ಯಾವುದೇ ಕಾರಣಕ್ಕೂ ಸಕ್ರಮ ಎನಿಸಿಕೊಳ್ಳುವುದಿಲ್ಲ. ಬಿ ಖಾತ ನೀಡುವ ಆಂದೋಲನವನ್ನು ಹಮ್ಮಿಕೊಳ್ಳುವ ಮೂಲಕ ಆಸ್ತಿಗಳ ಮಾರಾಟಕ್ಕೆ ಅವಕಾಶ ನೀಡಿ ಸ್ಟ್ಯಾಂಪ್ ಡ್ಯೂಟಿಯ ಮೂಲಕ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುವುದಕ್ಕೆ ಸರಕಾರ ಹೊರಟಿದೆ ವಿನಹ ಇದರಿಂದ ಜನಸಾಮಾನ್ಯರಿಗೆ ಶಾಶ್ವತ ಪರಿಹಾರ ದೊರಕುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಸುಳ್ಯದಂತಹ ಪಟ್ಟಣಗಳಲ್ಲಿ ಬಹುತೇಕ ನಿವೇಶನದಾರರು ಮತ್ತು ಅಕ್ರಮ ಕಟ್ಟಡ ನಿರ್ಮಿಸಿದವರು ಸರಕಾರಕ್ಕೆ ತೆರಿಗೆಯನ್ನು ಪಾವತಿಸಿಕೊಂಡು ಬರುತ್ತಿದ್ದಾರೆ. ಕೇವಲ ಕಳೆದ ಏಳೆಂಟು ವರ್ಷಗಳಿಂದ ಅಧಿಕಾರದ ಅನುಮತಿ ಪಡೆಯದೆ ಕಟ್ಟಿದ ಅಂದಾಜು 600 ರಿಂದ 700 ಕಟ್ಟಡಗಳ ಮಾಲೀಕರು ದುಪ್ಪಟ್ಟು ತೆರಿಗೆ ಪಾವತಿಸುತ್ತಿದ್ದು ಅವರುಗಳಿಗೆ ಮಾತ್ರ ಈ ಕಾನೂನಿನಿಂದ ತಾತ್ಕಾಲಿಕ ಪರಿಹಾರ ದೊರೆಯಲಿದೆ. ಸರಿಯಾಗಿ ಕಾನೂನನ್ನು ಅರ್ಥೈಸಿಕೊಳ್ಳದೆ ನಿವೇಶನಗಳು ಲಭ್ಯವಿದೆ ಎಂದು ಖರೀದಿದಾರರು ಪಡೆದುಕೊಂಡಲ್ಲಿ ಮುಂದಕ್ಕೆ ಕಟ್ಟಡ ಪುನರ್ ರಚನೆ ಮಾಡುವ ಸಂದರ್ಭದಲ್ಲಿ, ಬ್ಯಾಂಕ್ ಸಾಲ ಪಡೆಯುವ ಸಂದರ್ಭದಲ್ಲಿ, ಕಟ್ಟಡ ವಿಸ್ತರಣೆ ಸಂದರ್ಭದಲ್ಲಿ ಎಲ್ಲ ರೀತಿಯ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ವಿನಯ್ ಕುಮಾರ್ ಕಂದಡ್ಕ ಟೀಕಿಸಿದ್ದಾರೆ.ಆದಾಗ್ಯೂ ಪಟ್ಟಣ ಪಂಚಾಯತಿಗಳಲ್ಲಿ ಅನಧಿಕೃತ ಖಾತ (ನಮೂನೆ -3) ನೀಡಲು ಓಡಾಡುವ ದಲ್ಲಾಳಿಗಳಿಗೆ ಮತ್ತು ಬ್ರಷ್ಟಾಚಾರಿಗಳಿಗೆ ಒಂದಷ್ಟು ಕಡಿವಾಣ ಬೀಳಲಿದೆ ಎಂಬುದಷ್ಟೇ ಸಮಾಧಾನದ ಸಂಗತಿ ಆಗಿದೆ ಎಂದು ಅವರು ತಿಳಿಸಿದ್ದಾರೆ.