ಸುಳ್ಯ:ಮಳೆ ಹಾನಿ,ಪ್ರಾಕೃತಿಕ ವಿಕೋಪ ತಡೆಗೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಾಕೃತಿಕ ವಿಕೋಪ ಉಂಟಾದರೆ ಅದನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಜಯಲಕ್ಷ್ಮಿ ರಾಯಕೋಡ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮೇ.29ರಂದು ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪದಿಂದ
ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ದುರ್ಬಲ ಹಾಗೂ ಅಪಘಾತ ಸಾಧ್ಯತಾ ಸ್ಥಳಗಳನ್ನು ಗುರುತಿಸಿ ಅಲ್ಲಿರುವ ಜನರನ್ನು ಸ್ಥಳಾಂತರಿಸಬೇಕು ಎಂದು ಸೂಚಿಸಿದರು. ಸಹಾಯವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ಮಾಡಬೇಕು ಎಂದು ಅವರು ಸೂಚಿಸಿದರು. ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದ ಅವರು ಶಿಥಿಲಾವಸ್ಥೆಯಲ್ಲಿರುವ ಕೆಡವಲು ಪಟ್ಟಿ ಮಾಡಿದ ಶಾಲಾ ಕಟ್ಟಡಗಳ ತೆರವಿಗೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತಹಾ ಕಟ್ಟಡಗಳ ಸಮೀಪದಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು ಎಂದರು.

ಯಾವುದೇ ಅನುದಾನ ಬಳಕೆಯನ್ನು ಸರಕಾರಿ ಮಾರ್ಗ ಸೂಚಿಯ ಅನ್ವಯ ಮಾತ್ರ ಮಾಡಲು ಸಾಧ್ಯ. ಗೈಡ್ಲೈನ್ಸ್ ಪ್ರಕಾರ ಮಾತ್ರ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಗುವುದು ಎಂದ ಅವರು ಸರಕಾರಿ ಸಭಾ ಭವನಗಳನ್ನು ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಸರಕಾರಿ ಮಾರ್ಗಸೂಚಿಯಂತೆ ಬಾಡಿಗೆ ನಿಗದಿಪಡಿಸಬೇಕು ಎಂದರು.ಸುಳ್ಯ ನಗರ ಪಂಚಾಯತ್ ಘನ ತ್ಯಾಜ್ಯ ವಿಲೇವಾರಿಗೆ ಜಮೀನು ಕಾಯ್ದಿರಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಪ್ರಕ್ರಿಯೆಗೆ ವೇಗ ಹೆಚ್ಚಿಸಲು ಸೂಚಿಸಿದರು.
ಸುಳ್ಯ ನಗರದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಆಸಕ್ತ ರೈತರಿಗೆ ಗೊಬ್ಬರ ಮಾಡಲು ನೀಡಿ. ಕಸ ನೀಡಿ ಅದರ ಜೊತೆಗೆ ನಗರ ಪಂಚಾಯತ್ನಿಂದ ಹಣ ಪಾವತಿ ಮಾಡಲು ಅವಕಾಶ ಇಲ್ಲ. ಆದುದರಿಂದ ಆಸಕ್ತ ರೈತರ ಪಟ್ಟಿ ತಯಾರಿಸಿ ಅವರಿಗೆ ಗೊಬ್ಬರ ಮಾಡಲು ಹಸಿ ಕಸವನ್ನು ನೀಡುವಂತೆ ಅವರು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.ಗಾಂಧಿನಗರ ಶಾಲಾ ಕ್ರೀಡಾಂಗಣದಲ್ಲಿ ವಿದ್ಯುತ್ ಕಂಬಗಳನ್ನು ಹಾಕಿರುವ ಕುರಿತು ಚರ್ಚೆ ನಡೆದು ಅದನ್ನು ತೆರವು ಮಾಡಲು ಕೂಡಲೇ ಕ್ರಮ ಕೈಗೊಳ್ಳಲು ಅವರು ಮೆಸ್ಕಾಂಗೆ ಸೂಚಿಸಿದರು.
ಸಮಸ್ಯೆ ಹೇಳದೆ ಇಲಾಖಾ ಅಧಿಕಾರಿಗಳ ಮೌನ:
ತಾಲೂಕು ಪಂಚಾಯತ್ನ ಪಾಲನಾ ವರದಿಯ ಚರ್ಚೆಯ ಬಳಿಕ ಇಲಾಖೆಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸಮಸ್ಯೆಗಳಿದ್ದರೆ ಚರ್ಚೆ ಮಾಡುವ ಏನಾದರು ಸಮಸ್ಯೆಗಳು ಇದೆಯಾ ಎಂದು ಆಡಳಿತಾಧಿಕಾರಿಯವರು ಇಲಾಖಾ ಅಧಿಕಾರಿಗಳಲ್ಲಿ ಕೇಳಿದರು. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ಹೇಳದೇ ಅಧಿಕಾರಿಗಳು ಮೌನ ವಹಿಸಿದ್ದು ಕಂಡು ಬಂತು. ಎರಡೆರಡು ಬಾರಿ ಅಧ್ಯಕ್ಷರು ಸಮಸ್ಯೆಗಳಿದೆಯಾ ಎಂದು ಕೇಳಿದರೂ ಯಾರೂ ಕೂಡ ಯಾವುದೇ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಲಿಲ್ಲ. ಸುಳ್ಯ ತಾಲೂಕಿನಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹತ್ತು ಹಲವು ಮೂಲಭೂತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಮಸ್ಯೆಗಳಿದ್ದರೂ ಅದರ ಬಗ್ಗೆ ಯಾವುದೇ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪ ಮಾಡಿಲ್ಲ. ಪಾಲನಾ ವರದಿ ಹಾಗೂ ಅದರ ಕುರಿತ ಚರ್ಚೆಯ ಬಳಿಕ ಇತರ ವಿಷಯಗಳು, ಸಮಸ್ಯೆಗಳು ಇದ್ದರೆ ತಿಳಿಸುವಂತೆ ಆಡಳಿತಾಧಿಕಾರಿಗಳು ಸೂಚನೆ ನೀಡಿದರು. ಆದರೆ ಯಾರೂ ಮಾತನಾಡದ ಕಾರಣ ಅಧ್ಯಕ್ಷರು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಮುಕ್ತಾಯ ಮಾಡಲಾಯಿತು. ಪ್ರತಿ ಸಭೆಗೆ ಮುಂಚಿತವಾಗಿ ಯಾವುದೇ ಸಮಸ್ಯೆಗಳು ಇದ್ದರೆ ಅದನ್ನು ಗಮನಕ್ಕೆ ತರವಂತೆ ಮತ್ತು ಪಟ್ಟಿ ತಯಾರಿಸಿ ನೀಡುವಂತೆ ಅವರು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಹಶೀಲ್ದಾರ್ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.