ಸುಳ್ಯ:ಸುಳ್ಯ ವಿಧಾನ ಸಭಾ ಕ್ಷೆತ್ರದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲಾ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಶಿಫಾರಸ್ಸು ಪತ್ರವನ್ನೂ ನೀಡಿದ್ದಾರೆ. ಆದರೆ ಅನುದಾನ ಬಿಡುಗಡೆ ಮಾಡುವ ಸಂದರ್ಭದಲ್ಲಿ ಶಾಸಕರ ಶಿಫಾರಸ್ಸನ್ನು ಉಲ್ಲೇಖಿಸದೆ ಕಾಂಗ್ರೆಸ್ ಮುಖಂಡರ ಪ್ರಯತ್ನ, ಕಾಂಗ್ರೆಸ್ ಜನಪ್ರತಿನಿಧಿಗಳ ಶಿಫಾರಸ್ಸು ಎಂಬ
ರೀತಿಯಲ್ಲಿ ಬಿಂಬಿಸುವುದು ರಾಜಕೀಯ ದುರುದ್ದೇಶ ಎಂದು ಬಿಜೆಪಿ ಆರೋಪಿಸಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗು ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಆಲೆಟ್ಟಿ-ಬಡ್ಡಡ್ಕ ರಸ್ತೆ ಅಭಿವೃದ್ಧಿಗೆ, ಮೈತ್ತಡ್ಕ ಸೇತುವೆಯ ಅಭಿವೃದ್ಧಿ ಅನುದಾನಕ್ಕೆ ಶಾಸಕರು ಹಲವು ಬಾರಿ ಮನವಿ ನೀಡಿ ಪ್ರಯತ್ನ ನಡೆಸಿದ್ದಾರೆ. ಶಿಫಾರಸ್ಸನ್ನೂ ಮಾಡಿದ್ದಾರೆ. ಆದರೆ ಕ್ಷೇತ್ರದ
ಶಾಸಕರ ಈ ಶಿಫಾರಸ್ಸನ್ನು ಉಲ್ಲೇಖ ಮಾಡದೇ ಇರುವುದು ಶಾಸಕರ ಹಕ್ಕನ್ನು ಚ್ಯುತಿಗೊಳಿಸಿದಂತೆ ಎಂದು ಅವರು ಹೇಳಿದರು. ಇದೀಗ ಗ್ಯಾರಂಟಿ ಯೋಜನೆಗಳ ಮೇಲೆ ಹಲವು ಷರತ್ತುಗಳನ್ನು ಹಾಕಿ ಮರು ಪರಿಶೀಲನೆ ಮಾಡುತ್ತಿರುವುದು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಡಿತ ಮಾಡುವ ಪ್ರಯತ್ನ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ.ಟಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಬೆಳ್ಳಾರೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು,
ಪ್ರಮುಖರಾದ ಶಿವಾನಂದ ಕುಕ್ಕುಂಬಳ, ಚನಿಯ ಕಲ್ತಡ್ಕ, ಅಶೋಕ್ ಅಡ್ಕಾರ್, ಹರ್ಷಿತ್ ಕಾರ್ಜ ಉಪಸ್ಥಿತರಿದ್ದರು.








