*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಅಶಕ್ತ ಹಾಗು ಬಿಡಾಡಿ ಜಾನುವಾರುಗಳಿಗೆ ಆಶ್ರಯತಾಣ ಒದಗಿಸಬೇಕು ಎಂಬ ಉದ್ದೇಶದಿಂದ
ಸುಳ್ಯ ನಗರದ ಸಮೀಪದ ಕೊಡಿಯಾಲಬೈಲಿನಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಗೋಶಾಲೆ ಉದ್ಘಾಟನೆಯಾಗದೆ, ಕಟ್ಟಡದ ಸುತ್ತ ಕಾಡು ಸೇರಿದೆ. ಕಟ್ಟಡ ಮತ್ತಿತರ ವ್ಯವಸ್ಥೆ ನಿರ್ಮಾಣಗೊಂಡು ವರ್ಷಗಳು ಹಲವು ಕಳೆದರೂ, ಗೋಶಾಲೆ ನಿರ್ವಹಣೆಗೆ ಸಂಬಂಧಿಸಿದ ಇತರ ಸೌಕರ್ಯಗಳನ್ನು ಒದಗಿಸದೆ ಇರುವುದರಿಂದ ಗೋಶಾಲೆಯ
ಕಾರ್ಯ ಆರಂಭಕ್ಕೆ ಮೀನ ಮೇಷ ಎಣಿಸುವಂತಾಗಿದೆ.
ಕೋಡಿಯಾಲ್ ಬೈಲಿನ 7.7 ಎಕರೆ ಜಾಗದಲ್ಲಿ ಪಶು ಸಂಗೋಪನಾ ಇಲಾಖೆಯ ಅನುದಾನದಲ್ಲಿ ಗೋಶಾಲೆ ಕಟ್ಟಡ ನಿರ್ಮಾಣವಾಗಿದ್ದು ಕಟ್ಟಡದ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಇಲ್ಲಿಗೆ ಗೋವುಗಳನ್ನು ಸೇರಿಸಲು ಸಾಧ್ಯವಾಗಿಲ್ಲ.ಗೋವುಗಳ ಲಾಲನೆ ಪಾಲನೆ ಮತ್ತು ಗೋಶಾಲೆಗೆ ನಿರ್ವಹಣೆಗೆ ಬೇಕಾದ ವ್ಯವಸ್ಥೆಗೆ ಇನ್ನಷ್ಟು ಹೆಚ್ಚುವರಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ಇದರಿಂದ ಗೋಶಾಲೆ ಆರಂಭಕ್ಕೆ ವಿಘ್ನ ಎದುರಾಗಿದೆ.

ಸುಳ್ಯಕ್ಕೊಂದು ಸುಂದರ ಗೋಶಾಲೆ ಬೇಕು, ಬಿಡಾಡಿ ಜಾನುವಾರುಗಳಿಗೆ, ಅಶಕ್ತ ಗೋವುಗಳಿಗೆ ಒಂದು ಆಶ್ರಯ ತಾಣ ಬೇಕು ಎಂಬ ಉದ್ದೇಶದಿಂದ ಎಸ್.ಅಂಗಾರ ಸಚಿವರಾಗಿದ್ದ ಸಂದರ್ಭದಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗಿತ್ತು. ಕೊಡಿಯಾಲಬೈಲಿನ ಪಶುಪಾಲನಾ ಇಲಾಖೆಯ ವಿಶಾಲ ಪ್ರದೇಶದಲ್ಲಿ ಪ್ರಕೃತಿಯ ಮಧ್ಯೆ, ಸುಂದರ ಹಾಗೂ ಸುಸಜ್ಜಿತ ಗೋಶಾಲೆ ನಿರ್ಮಾಣವಾಗಿ 80 ಗೋವುಗಳಿಗೆ ಆಶ್ರಯ ನೀಡಲು ಯೋಜನೆ ರೂಪಿಸಲಾಗಿತ್ತು.50 ಲಕ್ಷ ರೂ. ವೆಚ್ಚದಲ್ಲಿ ನೂತನ ಗೋಶಾಲೆಗೆ ವಿಶಾಲವಾದ ಶೆಡ್, ಸ್ಥಳಕ್ಕೆ ಸುತ್ತಲೂ ಬೇಲಿ, 50 ಸಾವಿರ ಲಿಟರ್ನ ನೀರಿನ ಟ್ಯಾಂಕ್, ನೀರಿಗಾಗಿ ಬೋರ್ವೆಲ್ ಮತ್ತಿತರ ಕಾಮಗಾರಿಯ

ಯೋಜನೆ ರೂಪಿಸಲಾಗಿತ್ತು. ಕಟ್ಟಡ, ಟ್ಯಾಂಕ್ ನಿರ್ಮಾಣ, ಬೋರ್ವೆಲ್, ಪ್ಲಂಬಿಂಗ್ ಕಾರ್ಯ ಕಾಮಗಾರಿ ನಡೆದಿದೆ. ಅಷ್ಟರಲ್ಲಿ ಅಂಗಾರರ ಅಧಿಕಾರ ಅವಧಿ ಮುಗಿಯಿತು. ರಾಜ್ಯದಲ್ಲಿ ಸರಕಾರವೂ ಬದಲಾಯಿತು. ಬಳಿಕ ಇಲ್ಲಿ ಮೂಲಭೂತ ಅಗತ್ಯಕ್ಕೆ ಅನುದಾನ ಬಾರದೆ ಯೋಜನೆ ನೆನೆಗುದಿಗೆ ಬಿತ್ತು.
ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಅವರು ಗೋಶಾಲೆ ಆರಂಭಕ್ಕೆ ನಿರಂತರ ಪ್ರಯತ್ನ ನಡೆಸುತ್ತಾ ಬಂದರೂ ಅನುದಾನ ಬಿಡುಗಡೆ ಆಗಿಲ್ಲ.
ಪಶು ಆಹಾರ ಸಂಗ್ರಹ ಗೋದಾಮು, ಹುಲ್ಲು ಸಂಗ್ರಾಹಾಗಾರ, ಸಿಬ್ಬಂದಿಗಳ ವಸತಿ ಗೃಹ, ಮೇವು ಬೆಳೆಸಲು ಹುಲ್ಲುಗಾವಲು ಬೆಳೆಯಲು ಮತ್ತಿತರ ಅಗತ್ಯತೆಗಳಿಗೆ 36.54 ಲಕ್ಷ ಅನುದಾನದ ಬೇಡಿಕೆ ಇರಿಸಿ ಇಲಾಖೆಯ ವತಿಯಿಂದ ಪ್ರಸ್ತಾವನೆ ಸಲ್ಲಿಸಿದರೂ ಸರಕಾರದಿಂದ
ಅನುದಾನ ದೊರೆಯದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿದೆ.
ಸರ್ಕಾರಿ- ಖಾಸಗೀ ಸಹಭಾಗಿತ್ವದಲ್ಲಿ ಗೋಶಾಲೆ ಆರಂಭಿಸುವ ಪ್ರಯತ್ನ ನಡೆದರೂ ಅದೂ ಕೈಗೂಡಿಲ್ಲ.ಸರಕಾರದ

ಮಾರ್ಗಸೂಚಿಯಂತೆ ಗೋಶಾಲೆಯನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಖಾಸಗೀ ಟ್ರಸ್ಟ್ ಒಂದರ ಜೊತೆಗೆ ಸೇರಿ ನಡೆಸುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.
ಇಲ್ಲಿನ ಸುತ್ತಲ ಗೋಮಾಳ ಪ್ರದೇಶದಲ್ಲಿ ಗೋವುಗಳಿಗಾಗಿ ಹುಲ್ಲು ಬೆಳೆಯುವ ಯೋಜನೆಯನ್ನೂ ರೂಪಿಸಲಾಗಿತ್ತು. ವಾರೀಸುದಾರರಿಲ್ಲದ ಬಿಡಾಡಿ ಜಾನುವಾರುಗಳು, ಅಶಕ್ತ ಗೋವುಗಳನ್ನು ಆದ್ಯತೆಯ ಮೇರೆಗೆ ಇಲ್ಲಿ ಆಶ್ರಯ ನೀಡಿ ಸಾಕಿ ಸಲಹುವ ಯೋಜನೆ ರೂಪಿಸಲಾಗಿತ್ತು. ಆದರೆ ಅದ್ಯಾವುದೂ ಕೂಗೂಡಲಿಲ್ಲ..!









