ಸುಳ್ಯ: ಜಪಾನಿನ Asian Rural Institute (ARI) ನ ಸಂಶೋಧಕಿ ಮನೋಸಿ ಸ್ಯಾನ್ ಅವರು ಜಪಾನಿನ ತಮ್ಮ ಸಂಸ್ಥೆಯಿಂದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ “Learning from Nature” ಎಂಬ ವಿಷಯದಲ್ಲಿ ವಿಚಾರ ವಿನಿಮಯ ಮಾಡಿದರು. ಈ ಸೆಮಿನಾರ್ ನ್ನು ಅಂತರ್ಜಾಲದಲ್ಲಿ ವರ್ಚುವಲ್ ಮಾಧ್ಯಮದಲ್ಲಿ ಏರ್ಪಡಿಸಲಾಗಿತ್ತು. ಸ್ನೇಹದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ವಿದೇಶಗಳಲ್ಲಿ ಅಧ್ಯಯನ
ಸಾಧ್ಯತೆಗಳ ಬಾಗಿಲು ತೆರೆಯುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಯೋಜಿಸಿ ಕಾರ್ಯಗತ ಗೊಳಿಸಲಾಗಿದೆ. ARI ಸಂಸ್ಥೆಯ 50ನೇ ವರ್ಷದ ಆಚರಣೆ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ 30 ನೇ ವರ್ಷದ ಆಚರಣೆಯ ಜಂಟಿ ಕಾರ್ಯಕ್ರಮವಾಗಿ “ಫಾರ್ಮ್ ಮತ್ತು ಫಾರ್ಮರ್ ” ಎಂಬ ವಿಚಾರದಲ್ಲಿ ತಿಂಗಳಿಗೊಂದರಂತೆ ಸರಣಿ ಸೆಮಿನಾರ್ಗಳು ನಡೆಯಲಿವೆ. ಮೂಲತಃ ಭಾರತದಲ್ಲಿ ಹುಟ್ಟಿ ಬೆಳೆದ ಮನೋಸಿ ಸ್ಯಾನ್ ಅವರ ಇಂಗ್ಲಿಷ್ನ್ನು ಅರ್ಥ ಮಾಡಿ ಕೊಳ್ಳುವುದು ವಿದ್ಯಾರ್ಥಿಗಳಿಗೆ ಕಷ್ಟವಾಗಲಿಲ್ಲ ಎಂದು ಸ್ನೇಹ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆಯವರು ತಿಳಿಸಿದ್ದಾರೆ.
ಈ ವಿಚಾರ ಸಂಕಿರಣವನ್ನು ಸಂಯೋಜಿಸಿದ ಸ್ನೇಹ ಸಂಸ್ಥೆಯ ಕಾರ್ಯನಿರ್ವಾಹಕರಾದ ಶ್ರೀರಂಗಪಟ್ಟಣದ ಶಶಿಧರ್ ಅವರು ನಿರೂಪಣೆ ಮಾಡಿದರು. ಇಂತಹ ಕಾರ್ಯಕ್ರಮದ ಉಪಯುಕ್ತತೆಯ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಮಾತಾಡಿದರು. ಕೊನೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಕ್ಷರ ದಾಮ್ಲೆ ವಂದಿಸಿದರು.















