ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, “ಸಿರಿ” ಗ್ರಾಮೋದ್ಯೋಗ ಸಂಸ್ಥೆ, ರುಡ್ಸೆಟ್ ಸಂಸ್ಥೆ ಮೊದಲಾದ ಯೋಜನೆಗಳು ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣೆಯೊಂದಿಗೆ ರಾಷ್ಟ್ರದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಡಾ.ವೀರೇಂದ್ರ ಹೆಗ್ಗಡೆಯವರು ನೀಡುತ್ತಿರುವ
ಸೇವೆ ಅಮೂಲ್ಯವಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದಾರೆ.ಅವರು ಮೇ 31 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಳ “ಸಿರಿ “ಸಂಸ್ಥೆಯ ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕನ್ನು ಉದ್ಘಾಟಿಸಿ ಮಾತನಾಡಿದರು.ಅವರು ಸಿರಿ ಸಂಸ್ಥೆಯ ಉತ್ಪನ್ನಗಳನ್ನು ವೀಕ್ಷಿಸಿ, ಕೆಟಲಾಗ್ ಅನಾವರಣಗೊಳಿಸಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಮಾತನಾಡಿ ಧರ್ಮಸ್ಥಳದ ಯೋಜನೆಗಳು ಗ್ರಾಮೀಣ ಮಹಿಳೆಯರ ಆರ್ಥಿಕ ಸಶಕ್ತೀಕರಣಕ್ಕೆ ವಿಶೇಷ ಶಕ್ತಿ ನೀಡುತ್ತಿವೆ. ಭಾರತೀಯ ಸಂಸ್ಕೃತಿ ,ನಿಸ್ವಾರ್ಥ ಸೇವೆ,ಮಾನವ ಕಲ್ಯಾಣ, ಗ್ರಾಮೀಣ ವಿಕಾಸ ಯೋಜನೆಗಳು ಮಾದರಿಯಾಗಿವೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಆರ್ಥಿಕವಿಕಾಸದೊಂದಿಗೆ ಸಮಾಜದ ಉನ್ನತಿ ,ದೇಶದ ಸಮೃದ್ಧಿಗಾಗಿ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ಸಿರಿ”ಯನ್ನು ರಾಷ್ಟಮಟ್ಟಕ್ಕೆ ಕೊಂಡೊಯ್ಯಬೇಕು ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಗ್ರಾಮೀಣ ಮಹಿಳೆಯರ ಬದುಕಿಗೆ ಬೆಳಕಾಗಲಿ, ಗ್ರಾಮೀಣ ಪರಿವರ್ತನೆಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ,ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್,ಹೇಮಾವತಿ ವಿ ಹೆಗ್ಗಡೆ,ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ ಸುರೇಂದ್ರಕುಮಾರ್ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ್ ಸ್ವಾಗತಿಸಿ, ಎಸ್ ಡಿ ಎಂ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.














