ಅಹ್ಮದಾಬಾದ್: ಅದ್ಭುತ ಪ್ರದರ್ಶನದ ಮೂಲಕ ಭಾರತಕ್ಕೆ ಟಿ20 ಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ವಿಶ್ವಕಪ್ ಟೂರ್ನಿಯ ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ (ಸರಣಿ ಶ್ರೇಷ್ಠ) ಪ್ರಶಸ್ತಿ ಪಡೆದರು. ಎದುರಾಳಿ ಬ್ಯಾಟರ್ಗಳಲ್ಲಿ ನಡುಕ ಹುಟ್ಟಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದ
ಸ್ಪೀಡ್ ಸ್ಟಾರ್ ಜಸ್ಪ್ರೀತ್ ಬೂಮ್ರಾ ಪ್ಲೇಯರ್ ಆಫ್ ದಿ ಮ್ಯಾಚ್ (ಪಂದ್ಯ ಶ್ರೇಷ್ಠ) ಆದರು.ಫೈನಲ್ ಸೇರಿ ಸತತ ಮೂರು ಪಂದ್ಯದಲ್ಲಿ ಸ್ಪೋಟಕ ಅರ್ಧ ಶತಕ ಸಿಡಿಸಿ ಟಾಪ್ ಸ್ಕೋರರ್ ಆದ ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ 199 ಸ್ಟ್ರೈಕ್ ರೇಟ್ನಲ್ಲಿ 321 ರನ್ ಗಳಿಸಿದ ಸ್ಯಾಮ್ಸನ್ ವಿಕೆಟ್ ಕೀಪಿಂಗ್ನಲ್ಲಿಯೂ ಭರ್ಜರಿ ಪ್ರದರ್ಶನ ನೀಡಿದರು. ಕೊನೆಯ ಸೂಪರ್ 8 ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ್ದ ಸಂಜು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 89, ಫೈನಲ್ನಲ್ಲಿ ನ್ಯೂಝಿಲೆಂಡ್ ವಿರುದ್ಧ 89 ರನ್ ಸಿಡಿಸಿದ್ದರು.
ಫೈನಲ್ನಲ್ಲಿ 4 ಓವರ್ನಲ್ಲಿ ಕೇವಲ 15 ರನ್ ನೀಡಿ 4 ವಿಕೆಟ್ ಕಿತ್ತ ಜಸ್ಪ್ರೀತ್ ಬೂಮ್ರಾ ಪ್ಲೇಯರ್ ಆಪ್ ದಿ ಮ್ಯಾಚ್ ಆದರು. ಎದುರಾಳಿ ಬ್ಯಾಟರ್ಗಳನ್ನು ಕಟ್ಟಿ ಹಾಕುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಬುಮ್ರಾ ಟಿ20 ವಿಶ್ವಕಪ್ನ 8 ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸಿದರು.












