ಧರ್ಮಸ್ಥಳ:ನಮ್ಮ ದೇಹದ ಪಂಚೇಂದ್ರಿಯಗಳಿಗೂ ಅವಿನಾಭಾವ ಸಂಬಂಧವಿದ್ದು, ಸಾವಿರಾರು ವರ್ಷಗಳಿಂದ ಬಳಸುತ್ತಿರುವ ಪಾರಂಪರಿಕ ಆಯುರ್ವೇದ ಪದ್ಧತಿ ಮೂಲಕ ಪಂಚೇಂದ್ರಿಯಗಳ ಬಲವರ್ಧನೆಯೊಂದಿಗೆ ಆರೋಗ್ಯಭಾಗ್ಯ ಹೊಂದಬಹುದು ಎಂದು ಕೇಂದ್ರ ಸರ್ಕಾರದ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಪರಿಷತ್ನ ಅಧ್ಯಕ್ಷರಾದ ವೈದ್ಯ ಮನೀಷಾ ಕೋಟೆಕಾರ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ
ಆಪ್ತಾಸ್ ಆಯುರ್ವೇದ ಟ್ರಸ್ಟ್ನ ದಶಮಾನೋತ್ಸವದ ಅಂಗವಾಗಿ ಇಂದ್ರಿಯ ಆರೋಗ್ಯದ ಬಗ್ಯೆ ಆಯೋಜಿಸಿದ ಅಂತಾರಾಷ್ಟ್ರೀಯ ಸಮಾವೇಶ ‘ಪುನರ್ವಸು’ ಉದ್ಘಾಟಿಸಿ ಮಾತನಾಡಿದರು.
ಇಂದ್ರಿಯ ಆರೋಗ್ಯ ಅಭಿಯಾನದ ಲೋಗೊ ಅನಾವರಣಗೊಳಿಸಿ, ‘ಚೋಟಾ ಚರಕ’ ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೈನಂದಿನ ಜೀವನದಲ್ಲಿ ಆಯುರ್ವೇದ ಪದ್ಧತಿ ಬಳಕೆಯಿಂದ ಆಯುಷ್ಯ ವೃದ್ಧಿಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದು ಅವರು ಅಭಿಪ್ರಾಯಪಟಟರು.
ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ವೈದ್ಯ ಡಾ. ಶರದ್ಕುಮಾರ್ ಎಂ.,ಆಯುಷ್ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ,ಕರ್ನಾಟಕ ಸರ್ಕಾರದ ಆಯುಷ್ ಇಲಾಖಾ ಆಯುಕ್ತ ಡಾ. ಸುನಿಲ್ ಪನ್ವಾರ್ ಮಾತನಾಡಿದರು.
‘ಗುರುವಂದನ’ ಕಾರ್ಯಕ್ರಮದಡಿಯಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಲಾಯಿತು.ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾಅಮಿತ್ ಉಪಸ್ಥಿತರಿದ್ದರು.ಎಸ್.ಡಿ.ಎಂ. ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ಕಿರಣ್, ಕೆ. ಧನ್ಯವಾದವಿತ್ತರು. ಡಾ. ಅನುಪಮ ವಿ. ಚಿನ್ನಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ ಸಮಾರಂಭಕ್ಕೆ ಪೂರ್ವಾಭಾವಿಯಾಗಿ, ‘ಸಂಹಿತಾ’ಮೆರವಣಿಗೆ, ಪ್ರತಿಷ್ಠಾಪನೆ, ವಾದ್ಯಮೇಳ, ಶಂಖನಾದ, ಸಂಹಿತಾ ಪ್ರತಿಷ್ಠಾಪನೆ ಮೊದಲಾದ ಕಾರ್ಯಕ್ರಮಗಳು ನಡೆದವು.










