ಸುಳ್ಯ: ಸರಕಾರಿ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವಾಗಿ ಮಾಡುವ ಬಿಜೆಪಿ ಯಾವ ರಾಜಕೀಯ ಮಾಡುತಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ಪ್ರಶ್ನಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಯಂತ್ರ ಉದ್ಘಾಟನೆ ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು ಸರಕಾರದಿಂದ ಅನುದಾನ ಬಿಡುಗಡೆ ಆಗಿ
ಗುದ್ದಲಿ ಪೂಜೆ ಮಾಡುವಾಗ ಬಿಜೆಪಿ ಪ್ರಮುಖರೇ ವೇದಿಕೆಯಲ್ಲಿ ಇರುತ್ತಾರೆ, ಈ ಮೂಲಕ ಸರಕಾರಿ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವಾಗಿ ಮಾಡ್ತಾ ಇದ್ದಾರೆ.ಇದು ಚಿಲ್ಲರೆ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಸಚಿವರು ಬಂದಾಗಲೂ ಶಾಸಕರು ಇದ್ದೇ ಕಾರ್ಯಕ್ರಮ ಮಾಡುತ್ತೇವೆ. ಸರಕಾರ ಅನುದಾನ ಕೊಟ್ಟಾಗ ಜನಪ್ರತಿನಿದಿಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುವುದು ಒಳ್ಳೆಯ, ಅಭಿವೃದ್ಧಿ ಚಿಂತನೆಯ ಜನಪ್ರತಿನಿದಿಯ ಜವಾಬ್ದಾರಿ.
110 ಕೆ. ವಿ.ವಿದ್ಯುತ್ ಲೈನ್ ಕಾಮಗಾರಿ ಬಗ್ಗೆ ಶಾಸಕರು ಸಭೆ ಕರೆದಾಗಲೂ ಸರ್ವ ಪಕ್ಷದ ಪ್ರಮುಖರನ್ನು ಕರೆಯಬೇಕಿತ್ತು, ಬಿ. ಜೆ. ಪಿ. ನಾಯಕರು ಮತ್ತು ಅಧಿಕಾರಿಗಳು ಮಾತ್ರ ಸಭೆಯಲ್ಲಿ ಭಾಗವಹಿಸಿದರೆ ಸಾಕೇ ಎಂದು ಪ್ರಶ್ನಿಸಿದ ಅವರು ಆಡಳಿತ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಮಾತ್ರ ಸುಳ್ಯದ ಅಭಿವೃದ್ಧಿ ಆಗಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.