ಸುಳ್ಯ:ಕಾಂತಮಂಗಲದಲ್ಲಿ ತಲೆಗೆ ಕಲ್ಲು ಹಾಕಿ ವ್ಯಕ್ತಿಯೋರ್ವರ ಕೊಲೆ ಮಾಡಿರುವ ಘಟನೆಯ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟು ಎಡಮಂಗಲದ ಉದಯ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಡಗು ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ವಸಂತ (45) ಎಂಬ ವ್ಯಕ್ತಿಯನ್ನು ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆಗೈದ ನೆಲೆಯಲ್ಲಿ ಕಾಂತಮಂಗಲ ಶಾಲಾ ಜಗುಲಿಯಲ್ಲಿ ಮೃತದೇಹ ಪತ್ತೆಯಾಗಿತ್ತು.ಪ್ರಕರಣದ ತನಿಖೆಯನ್ನು
ಚುರುಕುಗೊಳಿಸಿದ ಪೊಲೀಸರು 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.ರವಿವಾರ ರಾತ್ರಿ ಘಟನೆ ನಡೆದಿದೆ.ಸುಳ್ಯ ಬಸ್ ನಿಲ್ದಾಣದಲ್ಲಿ ಕೊಲೆಯಾದ ವಸಂತ ಹಾಗೂ ಆರೋಪಿ ಉದಯ ಪರಿಚಯವಾದರು.ಬಳಿಕ ಇವರು ಒಟ್ಟಾಗಿ ಸುಳ್ಯದ ಬಾರ್ ಒಂದರಿಂದ ಮದ್ಯ ಸೇವಿಸಿ ಒಟ್ಟಾಗಿ ಕಾಂತಮಂಗಲ ಶಾಲೆಗೆ ತೆರಳಿದ್ದಾರೆ. ರಾತ್ರಿ ಇವರ ಮಧ್ಯೆ ಕಲಹ ಉಂಟಾಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿತ್ತು.
ಘಟನಾ ಸ್ಥಳದಲ್ಲಿ ಎರಡು ಮದ್ಯದ ಪ್ಯಾಕೆಟ್, ಒಂದು ಸಿಮ್ ಕಾರ್ಡ್ ಪತ್ತೆಯಾಗಿತ್ತು. ಇದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿತ್ತು. ಇವರಿಬ್ಬರು ಒಟ್ಟಿಗೆ ಮದ್ಯ ಸೇವಿಸುವ ಸಿಸಿ ಟಿವಿ ದೃಶ್ಯಗಳು ಸೇರಿದಂತೆ ಇತರ ಮಾಹಿತಿಗಳು ದೊರೆಯಿತು.ಈ ಹಿನ್ನಲೆಯಲ್ಲಿ ಪ್ರಕರಣದ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ಕೆ. ಅವರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆಗೆ ಪೊಲೀಸ್ ಇಲಾಖೆ ತಂಡವನ್ನು ರಚಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ
ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಪುತ್ತೂರು ಟೌನ್ ಸಿಐ ಸತೀಶ್, ಸುಳ್ಯ ಎಸೈ ಮಹೇಶ್, ಸುಬ್ರಹ್ಮಣ್ಯ ಎಸೈ ಕಾರ್ತಿಕ್ ಸೇರಿದಂತೆ ಪೊಲೀಸ್ ಅಕಾರಿಗಳು, ಸಿಬ್ಬಂದಿಗಳು ತನಿಖೆಯಲ್ಲಿ ಸಹಕರಿಸಿದ್ದಾರೆ.
ಮೃತರಾದ ವಸಂತ ವಿರಾಜೆಪೇಟೆ ಮೂಲದವರು. ವಸಂತ ಕುದುರೆಪಾಯದಿಂದ ವಿವಾಹವಾಗಿದ್ದು, ಅಲ್ಲೇ ನೆಲೆಸಿದ್ದರು ಎನ್ನಲಾಗಿದೆ. ವಸಂತ್ ಕಳೆದ ಕೆಲವು ಸಮಯದಿಂದ ಕಡಬ ತಾಲೂಕಿನ ಕಾಣಿಯೂರು ಎಂಬಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರವಿವಾರ ಅಲ್ಲಿಂದ ಸಂಬಳ ಪಡೆದು ಬಂದಿದ್ದರು. ತಲೆಗೆ ಕಲ್ಲು ಎತ್ತಿ ಹಾಕಿ ಕೃತ್ಯ ಎಸಗಿದ್ದರಿಂದ ಮುಖದ ಗುರುತು ಸಿಗುವಂತಿರಲಿಲ್ಲ. ಸ್ಥಳೀಯ ವ್ಯಕ್ತಿ ಅಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು. ಸುದ್ದಿ ಹಬ್ಬಿದ ಹಿನ್ನಲೆಯಲ್ಲಿ ಅಪರಾಹ್ನ ಕಾಣಿಯೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮನೆಯವರು ಆಗಮಿಸಿ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತರ ಪತ್ನಿಯೂ ಆಗಮಿಸಿ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.