ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಸೇರಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳ ಕೊಡಗು ಜಿಲ್ಲೆಯ ಮಳೆ ಭಾದಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸ.ಹಿ.ಪ್ರಾ.ಶಾಲೆಗೆ ಭೇಟಿ ನೀಡಿ
ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಶಾಸಕ ಪೊನ್ನಣ್ಣ ಸದ್ಯ ಶಿಕ್ಷಣ ಇಲಾಖೆ ನಿರ್ದೇಶನದಂತೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹತ್ತಿರದ ಸಂಪಾಜೆ ಶಾಲೆಗೆ ಸ್ಥಳಾಂತರ ಮಾಡಲಾಗಿದ್ದು, ಮೂರು ತಿಂಗಳ ಮಟ್ಟಿಗೆ ಸಂಪಾಜೆ ಶಾಲೆಯಲ್ಲಿಯೇ ಶಿಕ್ಷಣದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಮುಂದೆ ಕೊಯನಾಡಿನ ಪರಿಸರದಲ್ಲಿ ಸರ್ಕಾರಿ ಜಾಗ ಇದ್ದಲ್ಲಿ ನೂತನ ಶಾಲೆ ನಿರ್ಮಾಣದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಶಾಸಕರು ಪ್ರಸ್ತುತ ಭೂಕುಸಿತ ಸಂಭವಿಸಿರುವ ಕೊಯನಾಡು ಶಾಲಾ ಹಿಂಬದಿ ತಡೆಗೋಡೆ ನಿರ್ಮಾಣಕ್ಕೂ ಆದ್ಯತೆ ನೀಡುವುದಾಗಿ ತಿಳಿಸಿದರು.
ಮದೆನಾಡಿನ ಕರ್ತೋಜಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿ, ಗುಡ್ಡ ಕುಸಿಯುವ ಆತಂಕ ಇರುವ ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಮತ್ತು ಶಾಸಕ ಪೊನ್ನಣ್ಣ ಅವರು ಬಳಿಕ ಕೊಯನಾಡಿಗೆ ಆಗಮಿಸಿದರು.
ಕರಡಿಗೋಡು ನದಿ ದಡ ಸಂತ್ರಸ್ತರ ಭೇಟಿ ಮಾಡಿದರು. ಪ್ರವಾಹದ ಭೀತಿ ಎದುರಿಸುತ್ತಿದ್ದ ಕರಡಿಗೋಡು ನದಿ ದಡ ಸಂತ್ರಸ್ತರು. ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಧೈರ್ಯ ತುಂಬಿದರು. ವಿವಿಧ ಕಡೆ ಪರಿಶೀಲನೆ ನಡೆಸಿದರು.