ಸುಳ್ಯ:ಮಂಡೆಕೋಲು- ಅಜ್ಜಾವರ ವಿದ್ಯುತ್ ಗ್ರಾಹಕರ ವೇದಿಕೆ ವತಿಯಿಂದ ಮೆಸ್ಕಾಂ ಅಧಿಕಾರಿಗಳ ಜೊತೆ ಗ್ರಾಹಕರ ಸಂವಾದ ಕಾರ್ಯಕ್ರಮ ನಡೆಯಿತು.ಮಂಡೆಕೋಲು ಅಮೃತ ಸಹಕಾರ ಸದನದಲ್ಲಿ ನಡೆದ ಸಭೆಯಲ್ಲಿ ಅಜ್ಜಾವರ,ಮಂಡೆಕೋಲು ಹಾಗೂ ಕಾವು ಫೀಡರ್ಗಳಿಗೆ ಸಂಬಂಧಪಟ್ಟಂತೆ 11 ಕೆವಿ ಲೈನ್ ಗಳ ನಿರ್ವಹಣೆ, ಎಲ್ಲಾ ಹೆಚ್ ಟಿ ಲೈನ್ಗಳ ಮರದ ಗೆಲ್ಲುಗಳ ಕಟ್ಟಿಂಗ್ ಬಗ್ಗೆ, ಪರಿಣತ ಖಾಯಂ ಲೈನ್ ಮನ್ ನೇಮಕ, ತಾತ್ಕಾಲಿಕ ನೆಲೆಯಲ್ಲಿ
ಕೆಲಸಕ್ಕೆ ಗ್ರಾಮಕ್ಕೆ ಇಬ್ಬರಂತೆ ಸಿಬ್ಬಂದಿಗಳನ್ನು ನೇಮಿಸುವ ಬಗ್ಗೆ ಹೀಗೆ ನಿರಂತರ ವಿದ್ಯುತ್ ಸರಬರಾಜಿಗೆ ಆಗುವ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ ನಡೆಯಿತು. ಗ್ರಾಮದಲ್ಲಿ ಕಾವಲು ಸಮಿತಿಗಳನ್ನು ರಚನೆ ಮಾಡುವ ಬಗ್ಗೆಯೂ ಗ್ರಾಮಸ್ಥರಿಂದ ಸಲಹೆಗಳು ಬಂದವು. ಇಲಾಖಾ ವತಿಯಿಂದ ಹಾಜರಿದ್ದ ಜಾಲ್ಸೂರು ವಿಭಾಗದ ಜೆ.ಇ ಮಹೇಶ್ ಗ್ರಾಮಸ್ಥರ ಸಲಹೆ ಹಾಗೂ ಅಹವಾಲುಗಳಿಗೆ ಸ್ಪಂದಿಸುವ ಜೊತೆಗೆ ತಮ್ಮ ವ್ಯಾಪ್ತಿಗೆ ಮೀರಿದ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ಈ ತರುವುದಾಗಿ ತಿಳಿಸಿದರು. ಅಲ್ಲದೆ ಒಂದು ವಾರದೊಳಗೆ 11 ಕೆವಿ ಲೈನ್ಗಳನ್ನು ಸಂಪೂರ್ಣ ಸ್ವಚ್ಚ ಮಾಡುವುದಾಗಿಯೂ ಉಳಿದ ಹೆಚ್ ಟಿ ಹಾಗೂ ಎಲ್ ಟಿ ಲೈನ್ ಗಳನ್ನು ಗ್ರಾಮಸ್ಥರ ಸಹಕಾರದಿಂದ ಸ್ವಚ್ಚಗೊಳಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಕುಶಲ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಪಂಚಾಯತ್ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಕಿರಿಯ ಅಭಿಯಂತರರಾದ ಮಹೇಶ್ ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಮುಖರಾದ ಶಿವಪ್ರಸಾದ್ ಉಗ್ರಾಣಿಮನೆ, ಲಕ್ಷ್ಮಣ ಉಗ್ರಾಣಿಮನೆ, ಗಂಗಾಧರ ಮಾವಂಜಿ, ಉದಯಕುಮಾರ್ ಜಿ.ಟಿ, ಧನಂಜಯ ಉಗ್ರಾಣಿಮನೆ, ದಾಮೋದರ ಪಾತಿಕಲ್ಲು, ಅನಿಲ್ ತೋಟಪ್ಪಾಡಿ, ಶಶಿಧರ ಕಡಂಬಳಿತ್ತಾಯ, ಸಾವಿತ್ರಿ ಕಣೆಮರಡ್ಕ, ಸುಂದರ ನಾಯ್ಕ, ಸಂಧ್ಯಾ ಮಾವಂಜಿ, ಗೋಪಾಲ ಮಣಿಯಾಣಿ, ಜಗಧೀಶ್ ಚಾಕೋಟೆ ಮೊದಲಾದವರು ಉಪಸ್ಥಿತರಿದ್ದರು.