ಅಹಮದಾಬಾದ್: ಲಖನೌ ಸೂಪರ್ ಜೈಂಟ್ಸ್ ತಂಡವು ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನು 33 ರನ್ ಅಂತರದಿಂದ ಮಣಿಸಿತು.
ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಹಾಗೂ ವಿಲಿಯಮ್ ಓ’ರೂರ್ಕಿ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಲಖನೌ ಸೂಪರ್ ದಾಖಲಿಸಿತು.ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು
ಮೊದಲು ಬ್ಯಾಟ್ ಮಾಡಿದ ಲಖನೌ 20 ಓವರ್ಗಳಲ್ಲಿ 2 ವಿಕೆಟ್ಗೆ 235 ರನ್ ಪೇರಿಸಿತು.ಕಠಿಣ ಗುರಿ ಬೆನ್ನತ್ತಿದ ಆತಿಥೇಯ ಗುಜರಾತ್ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 202 ರನ್ ಗಳಿಸಲಷ್ಟೇ ಶಕ್ತವಾಯಿತು. ಶಾರುಕ್ ಖಾನ್ (29 ಎಸೆತ, 57 ರನ್) ಹೋರಾಟ ನಡೆಸಿದರೂ,ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ನಾಯಕ ಶುಭ್ಮನ್ ಗಿಲ್ 35, ಷೆರ್ಪೈನ್ ರುದರ್ಪೋರ್ಡ್ 38 ರನ್ ಬಾರಿಸಿದರು. ಲಖನೌ ಪರ ಓ’ರೂರ್ಕಿ ಮೂರು ವಿಕೆಟ್ ಪಡೆದರೆ, ಆವೇಶ್ ಖಾನ್, ಆಯುಷ್ ಬದೋನಿ ತಲಾ ಎರಡು ವಿಕೆಟ್ ಕಿತ್ತರು. ಶಹಬಾಜ್ ಅಹ್ಮದ್ ಮತ್ತು ಆಕಾಶ್ ಮಹರಾಜ್ ಸಿಂಗ್, ತಲಾ ಒಂದೊಂದು ವಿಕೆಟ್ ಪಡೆದರು.
ಲಖನೌ ಪರ ಮಿಚೇಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಮಾರ್ಷ್, ಐಪಿಎಲ್ನಲ್ಲಿ ಚೊಚ್ಚಲ ಶತಕದ (117 ರನ್) ಸಂಭ್ರಮ ಆಚರಿಸಿದರೆ, ಪೂರನ್ (56 ರನ್) 13ನೇ ಅರ್ಧಶತಕ ಬಾರಿಸಿದರು. ಕೇವಲ 56 ಎಸೆತಗಳಲ್ಲಿ ಶತಕ ಗಳಿಸಿದ ಮಾರ್ಷ್ 64 ಎಸೆತಗಳಲ್ಲಿ 10 ಬೌಂಡರಿ 8 ಸಿಕ್ಸರ್ ನೆರವಿನಿಂದ 117 ರನ್ ಬಾರಿಸಿದರು. ನಿಕೋಲಾಸ್ ಪೂರನ್ 27 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ನೆರವಿನಿಂದ 56 ರನ್ ಚಚ್ಚಿದರು.