ಸುಳ್ಯ:ಕೋವಿ ಪರವಾನಗಿದಾರ ಕೃಷಿಕರ ಸಭೆ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು. ಮುಂದೆ ನಡೆಯುವ ಯಾವುದೇ ಚುನಾವಣಾ ಸಂದರ್ಭಗಳಲ್ಲಿ ಬೆಳೆ ಸಂರಕ್ಷಣೆಗಾಗಿ ಪರವಾನಿಗೆ ಹೊಂದಿದ ಕೃಷಿಕರ ಬಂದೂಕುಗಳನ್ನು ಠೇವಣಿ ಇರಿಸುವುದರಿಂದ ವಿನಾಯತಿಗಾಗಿ
ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಮುಂದುವರಿಸಲು ನಿರ್ಧರಿಸಲಾಯಿತು. ಕೋವಿ ಪರವಾನಿಗೆಯನ್ನು ನವೀಕರಣ ಸಮಯದಲ್ಲಿ ಮಾತ್ರ ಪೋಲೀಸ್ ಠಾಣೆಗೆ ಹಾಜರು ಪಡಿಸಿದರೆ ಸಾಕು ಎಂಬ ಆದೇಶ ನೀಡುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸುವುದು. ವರ್ಷ ವರ್ಷವೂ ನೀಡಲಿರುವ ಬಂದೂಕುಗಳ ಹಾಗೂ ಪರವಾನಿಗೆಯ ತಪಾಸಣೆಯನ್ನು ಆಯಾ ಗ್ರಾಮಗಳಲ್ಲಿ ಪೋಲೀಸರು ಮಾಡಲು ವ್ಯವಸ್ಥೆ ಕಲ್ಪಿಸಬೇಕೆಂದು ಸರಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಯಿತು. ಬಂದೂಕು ಪರವಾನಿಗೆದಾರರು ಮೃತರಾದ ಸಂದರ್ಭಗಳಲ್ಲಿ ಪರವಾನಿಗೆಯನ್ನು ವಾರೀಸುದಾರರಿಗೆ ವರ್ಗಾಯಿಸುವ ವ್ಯವಸ್ಥೆಯನ್ನು ಈ ಹಿಂದಿನಂತೆ ಸರಳೀಕರಣ ಗೊಳಿಸಬೇಕು ಎಂದು ಒತ್ತಾಯಿಸಲು ನಿರ್ಣಯಿಸಲಾಯಿತು. ಪ್ರತೀ ಗ್ರಾಮಗಳಲ್ಲಿರುವ ಬಂದೂಕು ಪರವಾನಿಗೆ ಹೊಂದಿರುವ ಪ್ರತಿಯೊಬ್ಬ ಕೃಷಿಕರನ್ನು ಸಂಪರ್ಕಿಸಿ ಗುಂಪಿಗೆ ಸೇರಿಸಿಕೊಳ್ಳುವುದು ಇತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈಗಾಗಲೆ ಈ ಗುಂಪಿನ ಮುಖೇನ ನಡೆದ ಪ್ರಯತ್ನದ ಫಲವಾಗಿ ದಾವೆ ಹೂಡಿದವರಿಗೆ ತಕ್ಷಣ ಹಾಗೂ ಉಳಿದ ಕೃಷಿಕರಿಗೆ ಚುನಾವಣೆ ಮುಗಿದ ಕೂಡಲೆ ಬಂದೂಕು ಹಿಂಪಡೆಯಲು ಸಾದ್ಯವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಭೆಯ ನೇತೃತ್ವ ವಹಿಸಿದ್ದ ವಕೀಲರಾದ ಎಂ. ವೆಂಕಪ್ಪ ಗೌಡ, ಪ್ರಮುಖರಾದ ಪಿ.ಎಸ್. ಗಂಗಾಧರ, ವಿಶ್ವನಾಥ ರಾವ್, ಶಂಭಯ್ಯ ಪಾರೆ ,ಕೆ.ಪಿ.ಜಗದೀಶ ,ವಕೀಲರಾದ ಕೆ.ಎಲ್.ಪ್ರದೀಪ್ ಕುಮಾರ್ ಕೊಲ್ಲಮೊಗ್ರ ಮತ್ತಿತರರು ಮಾತನಾಡಿದರು. ದಾಮೋದರ ನಾರ್ಕೋಡು ,ಅಶೊಕ್ ಚುಂತಾರು, ಬಾಲಗೋಪಾಲ ಸೇರ್ಕಜೆ, ದಿವಾಕರ ಪೈ, ಹರೀಶ್ ಮೂರ್ಜೆ ಮತ್ತಿತರ ಕೃಷಿಕ ಕೋವಿ ಪರವಾನಿಗೆದಾರರು ಉಪಸ್ಥಿತರಿದ್ದರು.