ಸುಳ್ಯ:ಚುನಾವಣೆಯ ಸಂದರ್ಭ ರೈತರು ತಮ್ಮ ಪರವಾನಗಿ ಹೊಂದಿದ ಕೋವಿಗಳನ್ನು ಹತ್ತಿರದ ಪೋಲೀಸ್ ಠಾಣೆ ಅಥವಾ ಮದ್ದುಗುಂಡು ವ್ಯಾಪಾರಿಗಳಲ್ಲಿ ಡೆಪಾಸಿಟ್ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿರುವ ರೈತರಿಗೆ ಕೋವಿ ಠೇವಣಾತಿಯಿಂದ ವಿನಾಯಿತಿ ಲಭಿಸಿದೆ.ಕೋವಿ ಠೇವಣಾತಿ ವಿನಾಯಿತಿಗಾಗಿ ಜಿಲ್ಲಾಧಿಕಾರಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿಗೆ
ಅರ್ಜಿ ಸಲ್ಲಿಸಿದ ಹಾಗೂ ಹೈಕೋರ್ಟು ಮೆಟ್ಟಿಲೇರಿದ್ದ ಜಿಲ್ಲೆಯ ಸುಮಾರು 197 ರೈತರಿಗೆ ಹೈಕೋರ್ಟ್ ಆದೇಶದ ಮೇರೆಗೆ ವಿನಾಯಿತಿ ನೀಡಿ ಸ್ಕ್ರೀನಿಂಗ್ ಕಮಿಟಿ ಆದೇಶ ಮಾಡಿದೆ. ಈಗಾಗಲೇ ಪೋಲೀಸ್ ಠಾಣೆಗಳಲ್ಲಿ ಕೋವಿ ಠೇವಣಾತಿ ಇರಿಸಿರುವ ರೈತರು ತಮ್ಮ ಕೋವಿಗಳನ್ನು ಹಿಂತಿರುಗಿ ಪಡೆಯಬಹುದಾಗಿದೆ ಎಂದು ವಿನಾಯಿತಿಗಾಗಿನ ಹೋರಾಟದ ನೇತೃತ್ವ ವಹಿಸಿದ್ದ ವಕೀಲರಾದ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ.
ಚುನಾವಣೆಯ ಸಂದರ್ಭ ಕೋವಿ ಡೆಪಾಸಿಟ್ ಇಡುವ ಪರಿಪಾಠದಿಂದ ತೊಂದರೆಗೊಳಗಾಗುವ ರೈತರು ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಪಿ.ಎಸ್. ಪಿ.ಎಸ್.ಗಂಗಾಧರ ಮತ್ತಿತರ ನೇತೃತ್ವದಲ್ಲಿ ಸಭೆ ಸೇರಿ ಚರ್ಚಿಸಿ ಅರ್ಜಿ ಸಲ್ಲಿಸಿದ್ದರು. ಸ್ಪಂದನ ಕಂಡುಬರದಿದ್ದಾಗ ತಾಲೂಕು ಕಚೇರಿಯ ಎದುರು ಹಕ್ಕೊತ್ತಾಯ ಮಾಡಿದ್ದರು. ಆದರೂ ಸ್ಪಂದನ ಕಾಣದಿದ್ದಾಗ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದರು. ರೈತರ ಅರ್ಜಿಗಳನ್ನು ಪಡೆದು ಠೇವಣಾತಿ ವಿನಾಯಿತಿಗೆ ಸೂಕ್ತ ಆದೇಶ ಮಾಡುವಂತೆ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿಯು ರೈತರಿಂದ ಅರ್ಜಿ ಪಡೆದು ಅರ್ಜಿ ನೀಡಿದ 197 ಮಂದಿಗೆ ವಿನಾಯಿತಿ ನೀಡಿ ಆದೇಶ ಮಾಡಿದೆ. ಅವರಲ್ಲಿ 128 ಮಂದಿ ಸುಳ್ಯದವರು. 54 ಮಂದಿ ಕಡಬ ತಾಲೂಕಿನವರು ಎಂದು ತಿಳಿದುಬಂದಿದೆ.