ಮಂಜೇಶ್ವರ:ಬಹುಭಾಷಿಕ ಹಾಗೂ ಬಹು ಸಂಸ್ಕೃತಿಗಳ ಸಮುದಾಯದವರಾದ ದಕ್ಷಿಣ ಭಾರತೀಯರು ಜನ ಎಚ್ಚೆತ್ತುಕೊಳ್ಳದೆ ಹೋದಲ್ಲಿ ದಕ್ಷಿಣ ಭಾರತದ ಭಾಷೆಗಳೆಲ್ಲವೂ ನಶಿಸಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೇರಳ ಮತ್ತು ಗೋವಾ ರಾಜ್ಯದ 149 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ದಕ್ಷಿಣ ಭಾರತೀಯ ರಾಜ್ಯಗಳ
ಭಾಷೆಗಳು ಹಾಗೂ ಹಿಂದಿ ಭಾಷೆಯ ಬೆಳವಣಿಗೆಯ ಇಂದಿನ ಗತಿಯನ್ನು ತುಲನೆ ಮಾಡಿದ್ದಲ್ಲಿ ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಭಾಷೆಗಳು ಅವನತಿಯ ಕಡೆ ಮುಖ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಸಂವಿಧಾನವು ಭಾಷಿಕವಾಗಿ ದೇಶದ ಜನಕ್ಕೆ ಹಲವಾರು ಹಕ್ಕುಗಳನ್ನು ಕೊಟ್ಟಿದೆ. ರಾಜ್ಯ ಸರ್ಕಾರಗಳು ಗಡಿಭಾಗಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರುಗಳ ಹಿತ ಕಾಯಲು ಪ್ರತ್ಯೇಕ ಭಾಷಾ ನಿರ್ದೇಶಕರನ್ನು ನೇಮಿಸಬೇಕಿದೆ. ಸರ್ಕಾರಗಳು ತಮ್ಮ ನಾಡಿನ ಅಲ್ಪಸಂಖ್ಯಾತ ಭಾಷೆಗಳ ಕುರಿತಂತೆ ಗೌರವ ಹೊಂದಬೇಕಾದ್ದು ಪ್ರಾಥಮಿಕ ಜವಾಬ್ದಾರಿಯಾಗಿದ್ದು, ಕರ್ನಾಟಕದ ಎಲ್ಲ ನೆರೆ ರಾಜ್ಯಗಳ ಸರ್ಕಾರಗಳಿಗೆ ಸಂವಿಧಾನದತ್ತ ಅಧಿಕಾರದಂತೆ ಭಾಷಾ ನಿರ್ದೇಶಕರನ್ನು ನೇಮಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಲಿದೆ ಎಂದು ಡಾ.ಬಿಳಿಮಲೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರದ ಶಾಸಕ ಎ.ಕೆ.ಎಂ.ಆಶ್ರಫ್ ಮಾತನಾಡಿ
ಗಡಿನಾಡಿನ ಕನ್ನಡಿಗರು ಕನ್ನಡ ಭಾಷೆಯನ್ನು ಮರೆಯದೆ ತಲೆತಲಾಂತರಗಳಿಂದ ಅದನ್ನು ಪೋಷಿಸಿಕೊಂಡು ಬರುತ್ತಿರುವುದು ಅವರ ಕನ್ನಡ ಪ್ರೇಮವನ್ನು ಅಭಿವ್ಯಕ್ತಿಸುತ್ತದೆ. ಕೇರಳದ ಕನ್ನಡಿಗರೆಂದು ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
ಈ ರೀತಿಯ ಸ್ಪಂದನಾಶೀಲ ಕಾರ್ಯಕ್ರಮಗಳು ಗಡಿನಾಡಿನ ಕನ್ನಡಿಗರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತವೆ ಎಂದ ಎ.ಕೆ.ಎಂ.ಆಶ್ರಫ್, ಪ್ರಾಧಿಕಾರದ ಈ ಪ್ರಯತ್ನ ಶ್ಲಾಘನೀಯ ಎಂದರು.
ತಾವು ಮೊದಲ ಬಾರಿಗೆ ಕೇರಳದ ವಿಧಾನಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು, ಮೊದಲ ಭಾಷಣದ ಸಂದರ್ಭದಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಕವನ ವಾಚನವನ್ನು ಮಾಡಿದ್ದು ರೋಮಾಂಚಕ ಅನುಭವವೆಂದು ನೆನಪಿಸಿಕೊಂಡ ಆಶ್ರಫ್ ರವರು ಕಾಸರಗೋಡು ಕನ್ನಡಿಗರ ಹಿತಕ್ಕೆ ತಾವು ಎಂದೂ ಬದ್ಧರೆಂದು ತಿಳಿಸಿದರು.
ಸಾಹಿತಿ ಡಾ.ಜ್ಯೋತಿ ಚೆಳ್ಯಾರು ಅವರು ಮಾತನಾಡಿ, ಗಡಿನಾಡಿನ ಕನ್ನಡಿಗರು ಹಿಂದಿನಿಂದಲೂ ಸೃಜನಶೀಲ ಸಾಹಿತ್ಯ ವಲಯದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು, ಈ ಪರಂಪರೆ ಇಂದಿನ ಯುವ ಲೇಖಕಕರವರೆಗೂ ಮುಂದುವರೆದಿದೆ ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಅವರು ಸ್ವಾಗತಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷರಾದ ಶಮೀನಾ ಇಕ್ಬಾಲ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋಲ್ಡನ್ ರೆಹಮಾನ್, ಮಂಜೇಶ್ವರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಜೀನ್ ಲವೀನಾ ಮೊಂತೆರೋ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಎಲ್ಲ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಕವಿ ಗೋವಿಂದ ಪೈ ರವರು ವಾಸಿಸುತ್ತಿದ್ದ ಮನೆಗೆ ಎಲ್ಲ ಗಣ್ಯ ಅತಿಥಿಗಳು ಭೇಟಿ ನೀಡಿದರು.