*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಮಲೆನಾಡಿಗೆ ಚಿಕು ಬುಕು ಶಬ್ದ ಕೇಳುವ ನಿರೀಕ್ಷೆ ನೀಡಿದ್ದ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆಗೆ ರೆಡ್ ಸಿಗ್ನಲ್ ಬಿದ್ದಿದೆ.ಆ ಮೂಲಕ ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿ ಪ್ರದೇಶದ ಜನರ ನಿರೀಕ್ಷೆಯ ರೈಲ್ವೇ ಯೋಜನೆ ಹಳಿ ತಪ್ಪಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಕೇರಳ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ, ವನ್ಯ ಜೀವಿಧಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿ ಕಾಂಞಗಾಡ್ -ಕಾಣಿಯೂರು ರೈಲ್ವೇ ಹಳಿಯ ಪ್ರಸ್ತಾಪವನ್ನು ಕರ್ನಾಟಕ ಸರಕಾರ ತಿರಸ್ಕರಿಸಿದೆ. ದಶಕಗಳ ಹಿಂದೆ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕನಸಿನ ಯೋಜನೆಯನ್ನು ಮುಂದುವರಿಸುವುದಕ್ಕಾಗಿ ಅಗತ್ಯ ಕ್ರಮಗಳನ್ನು ಮುಂದುವರಿಸುತ್ತಾ ಬಂದಿತ್ತು. 92 ಕಿಲೋಮೀಟರ್ ಉದ್ದದ ಕಾಞಂಗಾಡು-ಕಾಣಿಯೂರು ರೈಲ್ಚೇ ಯೋಜನೆಗೆ 1400 ಕೋಟಿ ರೂ
ವೆಚ್ಚ ಅಂದಾಜಿಸಲಾಗಿತ್ತು.
ಆರಂಭದಿಂದಲೂ ಕರ್ನಾಟಕ ನಿರಾಸಕ್ತಿ:
ಡಿ.ವಿ.ಸದಾನಂದ ಗೌಡರು ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ 2014ರಲ್ಲಿ ಹಳಿಯ ಸರ್ವೆಗೆ ಅನುದಾನ ಮೀಸಲಿರಿಸಿ 2015ರಲ್ಲಿ ಪ್ರಾಥಮಿಕ ಸರ್ವೆ ಪೂರ್ತಿಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬ ನಿಲುವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿತ್ತು.ಇದಕ್ಕೆ ಒಪ್ಪಿಗೆ ಸೂಚಿಸಿದ ಕೇರಳ ಭೂಸ್ವಾಧೀನ ಮತ್ತು ಇತರ ಪ್ರಕ್ರಿಯೆಗಳಿಗೆ ಪ್ರಾರಂಭಿಕ ಹಂತದಲ್ಲಿ 20 ಕೋಟಿ ಮೀಸಲಿರಿಸಿತ್ತು. ಆದರೆ ಕರ್ನಾಟಕ ಆರಂಭದಿಂದಲೂ ಯೋಜನೆಯ ಬಗ್ಗೆ ನಿರಾಸಕ್ತಿ ವಹಿಸಿತ್ತು. ಕಾಸರಗೋಡು ಮತ್ತು ಸುಳ್ಯದ ಸ್ಥಳೀಯ ಪ್ರಮುಖರು ಸೇರಿ ಕ್ರಿಯಾ ಸಮಿತಿಯನ್ನು ರಚಿಸಿ ಪ್ರಯತ್ನ ನಡೆಸುತ್ತಾ ಬಂದರೂ ಜನಪ್ರತಿನಿಧಿಗಳ ಹಾಗು ಸರಕಾರದ ಮಟ್ಟದಲ್ಲಿ ಹೆಚ್ಚಿನ ಪ್ರಯತ್ನಗಳು ನಡೆದಿರಲಿಲ್ಲ. ರಾಜ್ಯಕ್ಕೆ ಈ ಯೋಜನೆಯಿಂದ ಹೆಚ್ಚಿನ ಅನುಕೂಲಗಳಿಲ್ಲ, ಅಲ್ಲದೆ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುವ ಕಾರಣ ಸಹಮತಿ ನೀಡಲು ಸಾಧ್ಯವಿಲ್ಲ ಎಂಬ ನಿಲುವನ್ನು ತಳೆಯುವ ಮೂಲಕ ಸರಕಾರ ಯೋಜನೆಯನ್ನು ತಿರಸ್ಕರಿಸಿದೆ.
1400 ಕೋಟಿ ಯೋಜನೆ:
2015ರಲ್ಲಿ ಯೋಜನೆಯ ಸಮೀಕ್ಷೆ ಪೂರ್ತಿಗೊಂಡಾಗ ಅನುಷ್ಠಾನಕ್ಕೆ 1400 ಕೋಟಿ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಕೇಂದ್ರ ಸರ್ಕಾರ ಮತ್ತು ಕೇರಳ ಮತ್ತು ಕರ್ನಾಟಕ ಸರ್ಕಾರ ಪಾಲುದಾರಿಕೆಯಲ್ಲಿ ಯೋಜನೆ ನಿರ್ವಹಿಸಬಹುದು ಎಂಬುದು ಕೇಂದ್ರ ಸರ್ಕಾರದ ನಿಲುವಾಗಿತ್ತು.15 ವರ್ಷಗಳ ಹಿಂದೆ ಯೋಜನೆಯ ಆಶಯ ಉಂಟಾದಾಗ 92 ಕಿ.ಮಿ.ಯೋಜನೆ ಕೇವಲ 400 ಕೋಟಿ ರೂವಿನಲ್ಲಿ ಪೂರ್ತಿಯಾಗಬಹುದು ಎಂದು ಅಂದಾಜಿಸಲಾಗಿತ್ತು.
ಕಾಞಂಗಾಡ್ನಿಂದ ಪಾಣತ್ತೂರುವರೆಗೆ 41 ಕಿ.ಮಿ. ಮತ್ತು ಪಾಣತ್ತೂರಿನಿಂದ ಸುಳ್ಯ ಮೂಲಕ ಕಾಣಿಯೂರಿಗೆ 51 ಕಿ.ಮಿ. ಒಟ್ಟು92 ಕಿ.ಮಿ. ಉದ್ದದ ಹಳಿ ನಿರ್ಮಿಸಿ ಮಲೆನಾಡ ತಪ್ಪಲ ಮೂಲಕ ರೈಲ್ವೇ ಸಂಪರ್ಕ ಸಾಧಿಸುವುದು ಯೋಜನೆಯ ಉದ್ದೇಶವಾಗಿತ್ತು.
ಒಂದೂವರೆ ದಶಕದ ಪ್ರಯತ್ನ ವಿಫಲ:
2006-07 ವರ್ಷದಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ಎಂಬ ಕನಸಿನ ಯೋಜನೆಯ ಆಶಯ ರೂಪುಗೊಂಡಿತು. ಬಳಿಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ನಡೆಸಿದ ಪ್ರಯತ್ನದ ಹಿನ್ನಲೆಯಲ್ಲಿ ಅಂದಿನ ರೈಲ್ವೇ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ 2008-09ರ ರೈಲ್ವೇ ಬಜೆಟ್ನಲ್ಲಿ ಪ್ರಥಮವಾಗಿ ಹಳಿಯ ಸರ್ವೆಗೆ ಅನುದಾನ ಮೀಸಲಿರಿಸಿತ್ತು. ಅದರಂತೆ ಪ್ರಥಮ ಹಂತದಲ್ಲಿ ಕಾಞಂಗಾಡ್ನಿಂದ ಪಾಣತ್ತೂರುವರೆಗೆ 41.ಕಿ.ಮಿ.ಹಳಿಯ ಸಮೀಕ್ಷೆ ನಡೆಸಲಾಯಿತು. ಬಳಿಕ ಡಿ.ವಿ.ಸದಾನಂದ ಗೌಡ ರೈಲ್ವೇ ಸಚಿವರಾಗಿ ಮಂಡಿಸಿದ ರೈಲ್ವೇ ಬಜೆಟ್ನಲ್ಲಿ ಕಾಞಂಗಾಡ್ನಿಂದ ಕಾಣಿಯೂರುವರೆಗೆ ಪೂರ್ತಿ ಸರ್ವೆ ನಡೆಸಲು ಅನುದಾನ ಮೀಸಲಿಸಿದರು. ಅದರಂತೆ 2015 ಮಾರ್ಚ್ನಲ್ಲಿ ಯೋಜನೆಯ ಸಮೀಕ್ಷೆ ಪೂರ್ತಿ ಮಾಡಿ ವರದಿ ಸಲ್ಲಿಸಲಾಗಿತ್ತು.
ಅಭಿವೃದ್ಧಿ ನಿರೀಕ್ಷೆ ಹುಸಿ:
ರೈಲ್ವೇ ಸಂಪರ್ಕ ಇಲ್ಲದ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಮಲೆನಾಡ ತಪ್ಪಲಿನ ಗ್ರಾಮಗಳಿಗೆ ರೈಲು ಸಂಪರ್ಕ ಕಲ್ಪಿಸಿ ಸಂಚಾರ ಕ್ರಾಂತಿ ಸಾಧ್ಯವಾಗಿಸುವುದರ ಜೊತೆಗೆ ಎರಡೂ ರಾಜ್ಯಗಳ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ದೊಡ್ಡ ಕೊಡುಗೆ ನೀಡಬಹುದು.ಕೇರಳಕ್ಕೆ ಬೆಂಗಳೂರು, ಮೈಸೂರು ಇನ್ನಷ್ಟು ಹತ್ತಿರ ಆಗುತ್ತದೆ ಎಂಬುದರ ಜೊತೆಗೆ ಮಲೆನಾಡಿನ ಈ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗಬಹುದು.ಇಲ್ಲಿನ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ದೊರೆಯುವ ಅವಕಾಶ ದೊರೆಯಲಿದೆ. ಶಿಕ್ಷಣ ಕೇಂದ್ರವಾದ ಸುಳ್ಯಕ್ಕೆ ಕೇರಳದಿಂದ ಬರುವವರಿಗೆ ಸುಲಭವಾಗಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ ತೆರೆದುಕೊಳ್ಳಬಹುದು. ಬೇಕಲ ಕೋಟೆ, ರಾಣಿಪುರಂ, ಕೊಡಗಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪೂರಕವಾಗಬಹುದು. ಶಬರಿಮಲೆ, ತಲಕಾವೇರಿ, ಸುಬ್ರಹ್ಮಣ್ಯ, ಧರ್ಮಸ್ಥಳ ಯಾತ್ರಿಕರಿಗೆ ಹೆಚ್ಚಿನ ಅನುಕೂಲ ಆಗಬಹುದು. ಹೀಗೆ ಕಾಞಂಗಾಡ್-ಕಾಣಿಯೂರು ಹಳಿ ನಿರ್ಮಾಣದಿಂದ ಬಲು ದೊಡ್ಡ ಅಭಿವೃದ್ಧಿ ಸಾಧ್ಯತೆಗಳೇ ತೆರೆದು ಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ನಿರೀಕ್ಷೆಯ ಹಳಿ ತಪ್ಪಿದೆ.
`ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿದು ಬಹಳ ನಿರಾಶೆ ಆಗಿದೆ. ಈ ಯೋಜನೆಯ ಬಗ್ಗೆ 2-3 ಹಂತದಲ್ಲಿ ಸರ್ವೆ ಆದಾಗಲೂ ಯಾವುದೇ ಪರಿಸರದ ವಿಷಯ ಬಂದಿರಲಿಲ್ಲ. ಇದೀಗ ಪರಿಸರ ಸೂಕ್ಷ್ಮ ಪ್ರದೇಶ ಕಾರಣದಿಂದ ತಿರಸ್ಕಾರ ಆಗಿದೆ ಎಂದು ತಿಳಿದು ಆಶ್ಚರ್ಯ ಉಂಟಾಗಿದೆ. ಯೋಜನೆಯ ಬಗ್ಗೆಗಿನ ಸ್ಪಷ್ಟವಾದ ಮಾಹಿತಿಯನ್ನು ಸರಕಾರಕ್ಕೆ ಮನದಟ್ಟು ಮಾಡದ ಕಾರಣ ಈ ರೀತಿ ಆಗಿದೆ.ಏನೇ ಆದರೂ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕ್ರಿಯಾ ಸಮಿತಿ ಪ್ರಯತ್ನ ಮುಂದುವರಿಸಲಿದೆ”
-ಪಿ.ಬಿ.ಸುಧಾಕರ ರೈ
ಕಾರ್ಯದರ್ಶಿ, ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ಕ್ರಿಯಾ ಸಮಿತಿ