ಕಲ್ಲಪಳ್ಳಿ:ಭಾರೀ ಮಳೆ ಮುಂದುವರಿದಿರುವ ಹಿನ್ನಲೆಯಲ್ಲಿ ಗಡಿ ಪ್ರದೇಶವಾದ ಕಲ್ಲಪಳ್ಳಿ ಸಮೀಪ ಕಮ್ಮಾಡಿ ಪ್ರದೇಶದ ಪತ್ತುಕುಡಿ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.ವಿಪರೀತ ಮಳೆಯಿಂದಾಗಿ ಇಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಅಲ್ಲದೆ ಸಮೀಪದಲ್ಲಿ ಹರಿಯುವ ಹೊಳೆಯಲ್ಲಿ ವಿಪರೀತ ನೀರು ಹಾಗೂ ಭೋರ್ಗರೆಯುವ ಶಬ್ದದ ಆತಂಕದಿಂದ ಇಲ್ಲಿಯ ನಿವಾಸಿಗಳು ರಾತ್ರಿಯೇ ತಮ್ಮ ಮನೆಗಳನ್ನು
ಬಿಟ್ಟು ಇತರ ಮನೆಗಳಿಗೆ ತೆರಳಿದ್ದರು.ಇದನ್ನು ಅರಿತ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಪನತ್ತಡಿ ಗ್ರಾಮಪಂಚಾಯತ್ ಅಧ್ಯಕ್ಷರ ಹಾಗೂ ವೆಳ್ಳೆರಿಕುಂಡು ತಹಶೀಲ್ದಾರ ಗಮನಕ್ಕೆ ತಂದಿದ್ದರು.
ಈ ಹಿನ್ನಲೆಯಲ್ಲಿ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ,
ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಕಲ್ಲಪಳ್ಳಿ, ಕಂದಾಯ ಅಧಿಕಾರಿಗಳು ಅರಣ್ಯಾಧಿಕಾರಿಗಳು, ಸ್ಥಳಕ್ಕೆ ಆಗಮಿಸಿದರು. ಸ್ಥಳ ಪರಿಶೀಲನೆ ನಡೆಸಿ
ಗುಡ್ಡ ಕುಸಿಯುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲಾ ನಿವಾಸಿಗಳನ್ನು ಕೂಡಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಯಿತು.
ಪತ್ತುಕುಡಿ ಪ್ರದೇಶದಲ್ಲಿ 10 ಮನೆಗಳಿದ್ದು, ಇದರಲ್ಲಿ ಎಂಟು ಮನೆಗಳಲ್ಲಿ ಮಾತ್ರ ವಾಸವಿದ್ದಾರೆ, ಈ ಮನೆಗಳಲ್ಲಿ ವಾಸವಿದ್ದ 26 ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ,.ಸ್ಥಳಕ್ಕೆ ರಾಜಪುರಂ ಸಿಐ, ಎಸ್ ಐ, ಜನ ಮೈತ್ರಿ ಪೊಲೀಸ್, ಮೆಡಿಕಲ್ ಆಫೀಸರ್, ಹೆಲ್ತ್ ಇನ್ಸ್ಪೆಕ್ಟರ್ ಮತ್ತಿತರರು ಆಗಮಿಸಿದ್ದರು.